ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಹರಡಿದೆ ರಾಷ್ಟ್ರೋತ್ಥಾನದ ಸೇವೆ : ಸಚಿವ ಎಸ್‌ಟಿಎಸ್‌

ಮೈಸೂರು: ಶಿಕ್ಷಣ ಕ್ಷೇತ್ರಕ್ಕೆ ರಾಷ್ಟ್ರೋತ್ಥಾನ ಪರಿಷತ್ ಮಹತ್ತರ ಕೊಡುಗೆ ನೀಡುತ್ತಾ ಬಂದಿದೆ. ಸಂಘದ ಸೇವೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಹರಡಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಬಣ್ಣಿಸಿದರು.

ಅವರಿಂದು ಮೈಸೂರಿನಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಶಾಲಾ ಕಟ್ಟಡದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿದೇಶಿ ಸಂಸ್ಕೃತಿಗೆ ಮಾರುಹೋಗುತ್ತಿರುವ ಇಂದಿನ ಪೀಳಿಗೆಯಲ್ಲಿ ಭಾರತೀಯ ಸಂಸ್ಕೃತಿಯನ್ನು ಬಿತ್ತುವ ಕೆಲಸವನ್ನು ರಾಷ್ಟ್ರೋತ್ಥಾನ ಪರಿಷತ್ ತಮ್ಮ ವಿದ್ಯಾಕೇಂದ್ರಗಳ ಮೂಲಕ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಸಮಾಜದ ಎಲ್ಲ ವರ್ಗದವರಿಗೆ ಶಿಕ್ಷಣ ನೀಡುತ್ತಿರುವ ರಾಷ್ಟ್ರೋತ್ಥಾನದ ಕಾರ್ಯವನ್ನು ಎಷ್ಟು ಬಣ್ಣಿಸಿದರು ಸಾಲದು. ಶಿಕ್ಷಣದ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ಕೂಡ ಸಂಘ ತೊಡಗಿಕೊಂಡಿದೆ ಎಂದು ಹೇಳಿದರು.

ಇಂದಿನ ದಿನಗಳಲ್ಲಿ ಶಿಕ್ಷಣ ಎಂದರೆ ಕೇವಲ ಸರ್ಟಿಫಿಕೇಟ್ ಕೋರ್ಸ್ ಎಂಬಂತಾಗಿದೆ. ‌ಅಂಕಗಳಿಗಷ್ಟೇ ಸೀಮಿತವಾಗುತ್ತಿರುವ ಇಂದಿನ ಶೈಕ್ಷಣಿಕ ಪದ್ಧತಿಯಲ್ಲಿ ಭಾರತೀಯ ಪರಂಪರೆ ಮಾಯವಾಗುತ್ತಿದ್ದು ವಿದೇಶಿ ಸಂಸ್ಕೃತಿ ಮೈಗೂಡುತ್ತಿದೆ. ಇಂತಹ ಸಂಧರ್ಭದಲ್ಲಿ ನಮ್ಮ ಮಕ್ಕಳಲ್ಲಿ ಭಾರತೀಯ ಸಂಸ್ಕಾರ ಬೆಳೆಸುವ ಕಾಯಕದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರಗಳು ಮುಂದಾಗುತ್ತಿವೆ. ಜನಜಾಗೃತಿ, ಜನಶಿಕ್ಷಣ, ಜನಸೇವೆ ಉದ್ದೇಶದಿಂದ ಆರಂಭಗೊಂಡ ರಾಷ್ಟ್ರೋತ್ಥಾನ ಪರಿಷತ್, ಇಂದಿನ ಯುವಪೀಳಿಗೆಯಲ್ಲಿ ರಾಷ್ಟ್ರೀಯ ವಿಚಾರಧಾರೆಗಳನ್ನು ತುಂಬುವ ಕೆಲಸ ಮಾಡುತ್ತಿದೆ. ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಕಾರ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಶಿಕ್ಷಿತ ಸಮಾಜದ ನಿರ್ಮಾಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಕೂಡ ನಡೆಸಿಕೊಂಡು ಬರುತ್ತಿದೆ.

ಶಿಕ್ಷಣದಿಂದ ವಂಚಿತ ಮಕ್ಕಳ ವಿಕಾಸಕ್ಕಾಗಿ ಹಾಗೂ ಅವರಲ್ಲಿ ಅಧ್ಯಯನಾಸಕ್ತಿ ಹೆಚ್ಚಿಸಲು ವ್ಯಾಸಂಗ ಕೇಂದ್ರಗಳನ್ನು ತೆರೆಯುವುದರ ಜೊತೆಗೆ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳಿಗೆ ಸಾಕಷ್ಟು ನೆರವು ನೀಡುತ್ತಿರುವ ಕಾರ್ಯವನ್ನು ನಾವು ಈ ಸಂದರ್ಭದಲ್ಲಿ ನೆನೆಯಬೇಕು. ಅದರಲ್ಲೂ ಗ್ರಾಮೀಣ
ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸಿ ಅವರಿಗೆ ಉಚಿತವಾಗಿ ಪಿಯುಸಿ ಹಾಗೂ ಐಐಟಿ ಪ್ರವೇಶಕ್ಕೆ ಪೂರಕ ಪರೀಕ್ಷೆಗೆ ತರಬೇತಿಗೊಳಿಸುವ ರಾಷ್ಟ್ರೋತ್ಥಾನ ಪರಿಷತ್‌ನ ತಪಸ್, ಸಾಧನಾ ಯೋಜನೆಯಿಂದ ಸಾವಿರಾರು ಬಡ ಮಕ್ಕಳಿಗೆ ಉನ್ನತ ವ್ಯಾಸಂಗ ಮಾಡುವ ಅವಕಾಶ ಸಿಕ್ಕಂತಾಗಿದೆ ಎಂದು ಹೇಳಿದರು.

× Chat with us