ನಂಜನಗೂಡು: ತಹಸಿಲ್ದಾರ್‌ ನೇತೃತ್ವದಲ್ಲಿ ಕಾರ್ಯಾಚರಣೆ, ಒತ್ತುವರಿಯಾಗಿದ್ದ ಸರ್ಕಾರಿ ಜಾಗ ವಶಕ್ಕೆ

ನಂಜನಗೂಡು: ತಹಸಿಲ್ದಾರ್ ಮೋಹನ್ ಕುಮಾರಿ, ನಗರಸಭೆ ಆಯುಕ್ತ‌ ರಾಜಣ್ಣ ಮತ್ತು ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ನಂಜನಗೂಡು ನಗರದ ರಸ್ತೆಯ ಅಕ್ಕಪಕ್ಕದಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಜಾಗವನ್ನು ಸೋಮವಾರ ವಶಪಡಿಸಿಕೊಂಡರು.

ಬೆಳ್ಳಂಬೆಳಿಗ್ಗೆ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಸ್ಥಳದಲ್ಲೇ ಜಾಗವನ್ನು ಅಳತೆ ಮಾಡಿಸಿ ಗುರುತು ಕಲ್ಲುಗಳನ್ನು ನೆಡಿಸಿದರು.

ಸರ್ಕಾರಿ ಜಾಗವನ್ನು ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಆಗಮಿಸಿ ಅಧಿಕಾರಿಯೊಂದಿಗೆ ಮಾತುಕತೆ ನಡೆಸಿದರು. ʻಎಲ್ಲರಿಗೂ ಒಂದು ವರ್ಷದಿಂದಲೇ ನೋಟಿಸ್ ನೀಡಿದ್ದೇವೆ. ನಿಮ್ಮ ಜಾಗದಲ್ಲಿ ನೀವೇ ಇರಿ ಸರ್ಕಾರಿ ಜಾಗವನ್ನು ಬಿಡುವಂತೆ ಹೇಳಿದರೂ ಕೂಡ ನಮ್ಮ ಮಾತಿಗೆ ಸ್ಪಂದಿಸಲಿಲ್ಲ. ಆದ್ದರಿಂದ ಕಾನೂನು ಪ್ರಕಾರ ನಾವು ಬಂದು ಅಳತೆ ಮಾಡಿ ಸರ್ಕಾರಿ ಜಾಗವನ್ನು ವಶಪಡಿಸಿಕೊಳ್ಳುತ್ತಿರುವುದಾಗಿʼ ತಹಸಿಲ್ದಾರ್‌ ಅವರು ಮಾಜಿ ಶಾಸಕರಿಗೆ ಮನವರಿಕೆ ಮಾಡಿಕೊಟ್ಟರು.

ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸರ್ಕಾರಿ ಜಾಗವನ್ನು ವಶಕ್ಕೆ ಪಡೆದಿದ್ದೇನೆ. ಜೊತೆಗೆ ಗ್ರಾಮಾಂತರ ಪ್ರದೇಶಗಳಲ್ಲಿ ಕೆರೆಗಳನ್ನು ಒತ್ತುವರಿ ಮಾಡಿಕೊಂಡಿದ್ದು, ಅದನ್ನೂ ಅಳತೆ ಮಾಡಿಸಿ ವಶಕ್ಕೆ ಪಡೆಯುತ್ತೇವೆ. ಕೆಲವು ದಿನಗಳಲ್ಲಿ ಕೆರೆಗಳ ಒತ್ತುವರಿಗಳ ಬಗ್ಗೆ ಕ್ರಮಕೈಗೊಂಡು ಜಾಗ ವಶಕ್ಕೆ ಪಡೆಯುತ್ತೇನೆ ಎಂದರು.

× Chat with us