ʻಹೊಲಗೇರಿʼ ವಿವಾದ: ಚಂದ್ರಕಲಾ ಹೇಳಿಕೆಗೆ ಶಾಸಕ ಎನ್.ಮಹೇಶ್‌ ಅಸಮಾಧಾನ

ಹಾಸನ: ಸಂದರ್ಶನವೊಂದರಲ್ಲಿ ʻಹೊಲಗೇರಿʼ ಎಂಬ ಪದ ಬಳಸಿ ವಿವಾದಕ್ಕೆ ಗುರಿಯಾಗಿದ್ದ ನಟಿ ಚಂದ್ರಕಲಾ ಮೋಹನ್‌ ವಿರುದ್ಧ ಶಾಸಕ ಎನ್.ಮಹೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

ಹಾಸನದಲ್ಲಿ ದಲಿತ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಎನ್.ಮಹೇಶ್‌, ʻಚಂದ್ರಕಲಾ ಹೇಳಿಕೆಯಲ್ಲಿ ತಪ್ಪೇನಿಲ್ಲ. ಊರು ಇದ್ದ ಕಡೆ ಬಹುತೇಕ ಕಡೆ ಹೊಲಗೇರಿ, ಒಕ್ಕಲಗೇರಿ, ಕುರುಬರಗೇರಿ ಇವೆ. ಆದರೆ, ಆಕೆ ತನ್ನ ಹೇಳಿಕೆ ಸಮರ್ಥನೆಗೆ ಬಳಿಸಿದ ʻಹೊಲಸುʼ ಪದದ ಬಗ್ಗೆ ನನ್ನ ಆಕ್ಷೇಪ ಇದೆ. ಇದನ್ನು ನೋವಿನಿಂದ ಹೇಳುತ್ತಿದ್ದೇನೆʼ ಎಂದು ಬೇಸರ ವ್ಯಕ್ತಪಡಿಸಿದರು.

ಚಂದ್ರಕಲಾ ಅವರ ಮಾತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಜನ ತೀರಾ ಕೆಳಮಟ್ಟದ ಭಾಷೆ ಉಪಯೋಗಿಸಿ ಟೀಕಿಸುತ್ತಿರುವುದು ಸರಿಯಲ್ಲ. ಈ ರೀತಿಯ ವರ್ತನೆ ನಮ್ಮ ಸಂಸ್ಕೃತಿ ಅಲ್ಲ. ಈ‌ ಕೂಡಲೇ ಅಂತಹ ಟೀಕೆಗಳನ್ನು ನಿಲ್ಲಿಸಿ, ಅದರ ಬದಲು ಅವರಿಗೆ ವಿಷಯ ಮನವರಿಕೆ ಮಾಡಿಕೊಡಿ ಎಂದು ಟೀಕಾಕಾರರಿಗೆ ಎನ್.ಮಹೇಶ್‌ ಸಲಹೆ ನೀಡಿದರು.

ಕಳೆದ ವಾರ ಬಿಗ್‌ಬಾಸ್‌ನಿಂದ ಎಲಿಮಿನೇಟ್ ಆಗಿ ಹೊರಬಂದಿದ್ದ ಚಂದ್ರಕಲಾ ಮೋಹನ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ʻಹೊಲಗೇರಿʼ ಪದವನ್ನು ವಿವಾದಾತ್ಮಕವಾಗಿ ಬಳಸಿ ಟೀಕೆಗೆ ಗುರಿಯಾಗಿದ್ದರು. ಪುನಃ ವಿಡಿಯೊ ಮಾಡಿ ತನ್ನ ಹೇಳಿಕೆಯ ಅರ್ಥ ಅದಲ್ಲ, ‘ಹೊಲಸು’ ಅಂತ ಹೇಳುವ ಬದಲು ಹೊಲೆಗೇರಿ ಎಂದಿದ್ದೆ ಎಂದು ಕ್ಷಮೆಯಾಚಿಸಿದ್ದರು.

× Chat with us