ಮೈಸೂರು ವಿ.ವಿ.: ಮೃತ ನೌಕರರ ಮಕ್ಕಳಿಗೆ ಎಫ್‌ಡಿಎ ಹುದ್ದೆ, ಮಂಟೆಸ್ವಾಮಿ-ಸಿದ್ಧಪ್ಪಾಜಿ-ರಾಚಪ್ಪಾಜಿ ಅಧ್ಯಯನ ಪೀಠ

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಮೃತ ನೌಕರರ ಮಕ್ಕಳಿಗೆ ಎಫ್‌ಡಿಎ ಹುದ್ದೆ ನೀಡುವ ನಿಯಮ ಜಾರಿಗೆ ಒಪ್ಪಿಗೆ ಸೂಚಿಸಲಾಗಿದೆ.

ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ವಿಜ್ಞಾನ ಭವನದಲ್ಲಿ ನಡೆದ ಶಿಕ್ಷಣ ಮಂಡಳಿಯ ೨ನೇ ಸಾಮಾನ್ಯ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳಿಗೆ ಅನುಮೋದನೆ ದೊರೆಯಿತು.

ಮೈಸೂರು ವಿವಿಯ ನೌಕರರು ಮೃತಪಟ್ಟರೆ ಅವರ ಮಕ್ಕಳು ಯಾವುದೇ ವಿದ್ಯಾರ್ಹತೆ ಹೊಂದಿದ್ದರೂ, ಕಿರಿಯ ದರ್ಜೆ ಸಹಾಯಕ ಹುದ್ದೆಗಳನ್ನು ನೀಡಲಾಗುತ್ತಿತ್ತು. ಎಸ್‌ಎಸ್‌ಎಲ್‌ಸಿಗಿಂತಲೂ ಕೆಳಗಿದ್ದರೆ ಅಟೆಂಡರ್ ಹುದ್ದೆ ನೀಡಲಾಗುತ್ತಿತ್ತು. ಆದರೆ ಸರ್ಕಾರದ ತಿದ್ದುಪಡಿಯಿಂದ ಅವರ ವಿದ್ಯಾರ್ಹತೆಗೆ ತಕ್ಕಂತೆ ಅನುಕಂಪದ ಆಧಾರದ ಮೇಲೆ ಪ್ರಥಮ ದರ್ಜೆ ಸಹಾಯಕ ಹುದ್ದೆ ನೀಡಬಹುದಾಗಿದೆ. ಈ ನಿಯಮವನ್ನು ಮೈವಿವಿಯಲ್ಲೂ ಜಾರಿಗೆ ತರುವುದಕ್ಕೆ ಸದಸ್ಯರು ಒಪ್ಪಿಗೆ ಸೂಚಿಸಿದರು.

ಮಂಟೇಸ್ವಾಮಿ, ಸಿದ್ಧಪಾಜಿ, ರಾಜಪ್ಪಾಜಿ ಅಧ್ಯಯನ ಪೀಠ ಸ್ಥಾಪನೆ

ಮೈವಿವಿಯಲ್ಲಿ ಹಳೇ ಮೈಸೂರು ಭಾಗದ ಸಾಂಸ್ಕೃತಿಕ ನಾಯಕರಾದ ಮಂಟೇಸ್ವಾಮಿ, ಸಿದ್ದಪ್ಪಾಜಿ, ರಾಚಪ್ಪಾಜಿ ಅವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಲಾಗುವುದು. ಅಲ್ಲದೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದ ಜತೆಯಲ್ಲಿ ರಾಜ್ಯ ಸರ್ಕಾರ ಮಂಜೂರು ಮಾಡಿರುವ ೩೦ ಲಕ್ಷ ರೂ.ಗಳನ್ನು ಒಂದು ಬಾರಿ ಕಾರ್ಪಸ್ ನಿಧಿಯಾಗಿಟ್ಟು, ಅದರಿಂದ ಬರುವ ಬಡ್ಡಿ ಹಣದಲ್ಲಿ ಈ ಪೀಠಗಳಲ್ಲಿ ಕಾರ್ಯಕ್ರಮ ನಡೆಸಲು ವಿನಿಯೋಗಿಸುವುದಾಗಿ ಕುಲಪತಿ ತಿಳಿಸಿದರು.

ಆದಿವಾಸಿಗಳ ಅಭಿವೃದ್ಧಿಗೆ ಕ್ರಮ

ಆದಿವಾಸಿ ವಿದ್ಯಾರ್ಥಿಗಳ ಅಭಿವೃದ್ಧಿ ದೃಷ್ಟಿಯಿಂದ ʻಉನ್ನತ ಭಾರತʼ ಯೋಜನೆ ಮತ್ತು ಸ್ಮಾರ್ಟ್ ವಿಲೇಜ್ ಯೋಜನೆಯಲ್ಲಿ ಮೈಸೂರು ವಿವಿ ದತ್ತು ಪಡೆದಿರುವ ಪಿ.ಜಿ.ಪಾಳ್ಯ, ಮೀಣ್ಯ, ಮಹದೇಶ್ವರಬೆಟ್ಟ ಪೊನ್ನಾಚ್ಚಿ ಹಾಗೂ ಪುತ್ತೂರು ಗ್ರಾಮಗಳಿಂದ ಬರುವ ವಿದ್ಯಾರ್ಥಿಗಲ್ಲಿ ತಲಾ ಒಬ್ಬ ಯುವಕ, ಯುವತಿಗೆ ಉನ್ನತ ಶಿಕ್ಷಣ ವ್ಯಾಸಂಗಕ್ಕೆ ಸೀಟ್‌ಗಳನ್ನು ಮೀಸಲಿಡಲು ಅನುಮತಿ ನೀಡಲಾಯಿತು. ಈ ಯೋಜನೆಯಲ್ಲಿ ಸೋಲಿಗರು, ಆದಿವಾಸಿಗಳು ಎಂದು ಪ್ರತ್ಯೇಕಿಸಲಾಗುವುದಿಲ್ಲ. ದತ್ತು ಪಡೆದ ಹಳ್ಳಿಗಳಿಂದ ಬರುವ ಇಬ್ಬರು ವಿದ್ಯಾರ್ಥಿಗಳಿಗೆ ಮಾತ್ರವೇ ಪ್ರವೇಶಾತಿಗೆ ಅನುಮತಿಸಲಾಗುವುದು ಎಂದು ಕುಲಪತಿ ತಿಳಿಸಿದರು.

ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಪರೀಕ್ಷಾಂಗ ಕುಲಸಚಿವ ಕೆ.ಎಂ.ಮಹಾದೇವನ್, ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ, ಮಂಡಳಿ ಸದಸ್ಯರಾದ ಪ್ರೊ.ಮುಜಾಫರ್ ಅಸ್ಸಾದಿ, ಡಾ.ಬಿ.ನಿರಂಜನ್, ಪ್ರೊ.ಎನ್.ಎಂ.ತಳವಾರ, ನಿಂಗಮ್ಮ ಬೆಟ್ಟಸೂರ್, ಪ್ರೊ. ನಿರಂಜನ ವಾನಳ್ಳಿ ಇನ್ನಿತರರು ಹಾಜರಿದ್ದರು.

× Chat with us