ರಾಷ್ಟ್ರೀಯ ಶಿಕ್ಷಣ ನೀತಿ-2020ರ ಕರಡು ಪ್ರತಿ ಕನ್ನಡಕ್ಕೆ ತರ್ಜುಮೆ: ಮೈವಿವಿ ಸಿಂಡಿಕೇಟ್‌ ಸಭೆ

ಮೈಸೂರು: ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ರ ಕರಡು ಪ್ರತಿಯನ್ನು ಹಿಂದಿ ಹಾಗೂ ಇಂಗ್ಲಿಷ್‌ನಿಂದ ಕನ್ನಡಕ್ಕೆ ತರ್ಜುಮೆ ಮಾಡಲು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ಅನುಮೋದನೆ ನೀಡಿತು.

ಇತ್ತೀಚೆಗೆ ನಡೆದಿದ್ದ ಸಿಂಡಿಕೇಟ್ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದ ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜ್, ನಮ್ಮ ವಿಶ್ವವಿದ್ಯಾನಿಲಯ ಬೇರೆ ವಿಶ್ವವಿದ್ಯಾನಿಲಯಗಳಿಗೆ ಮಾದರಿಯಾಗಬೇಕಾದರೆ ಹೆಚ್ಚು ಸೆಮಿನಾರ್ ಹಾಗೂ ವೃತ್ತಿ ಆಧಾರಿತ ಕೋರ್ಸ್‌ಗಳನ್ನು ನಡೆಸಬೇಕು. ಜತೆಗೆ ಆಂಗ್ಲ ಹಾಗೂ ಹಿಂದಿಯಲ್ಲಿ ಮಾತ್ರ ಲಭ್ಯವಿರುವ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಪ್ರತಿಯನ್ನು ಕನ್ನಡೀಕರಿಸಬೇಕು. ನಮ್ಮ ಆಡಳಿತ ಭಾಷೆ ಕನ್ನಡ ಆಗಿರುವ ಕಾರಣ ಇದನ್ನು ಕನ್ನಡಕ್ಕೆ ತರ್ಜುಮೆ ಮಾಡಿ ವಿವಿಯ ಮುದ್ರಣ ಘಟಕದಿಂದ ಮುದ್ರಣ ಮಾಡಿಸಬೇಕು ಎಂದಿದ್ದರು.

ಸಿಂಡಿಕೇಟ್ ಸಭೆಯ ನಂತರ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್ ಅವರು ಸದರಿ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ.ನಾಗಣ್ಣ ಅವರನ್ನೊಳಗೊಂಡ ತಂಡವೊಂದನ್ನು ರಚಿಸಿ ಅವರಿಗೆ ತರ್ಜುಮೆ ಕಾರ್ಯದ ಜವಾಬ್ದಾರಿ ವಹಿಸಲು ನಿರ್ಧಾರ ಕೈಗೊಂಡಿದ್ದರು. ಹೀಗೆ ಮಾಡಿದರೆ ನೂತನ ಶಿಕ್ಷಣ ನೀತಿಯನ್ನು ಸ್ವತಃ ಓದಲು, ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಭಾಷೆಯ ಕಾರಣದಿಂದ ಮಾಹಿತಿಯ ಕೊರತೆಯಾಗುತ್ತದೆ ಎಂಬ ನಿಂಗರಾಜ್ ಅವರ ಅಭಿಪ್ರಾಯಕ್ಕೆ ಸಹಮತ ಸೂಚಿಸಿ ಕನ್ನಡಕ್ಕೆ ತರ್ಜುಮೆ ಮಾಡಿಸಲು ತೀರ್ಮಾನ ತೆಗೆದುಕೊಂಡಿದ್ದಾರೆ.

× Chat with us