ಮೈಸೂರು ವಿವಿ ಉತ್ತರ ಪತ್ರಿಕೆ ಸೋರಿಕೆ ಪ್ರಕರಣ: ಆರೋಪಿ ಬಂಧನ

ಮೈಸೂರು: ಮೈಸೂರು ವಿವಿ ಪದವಿ ಪರೀಕ್ಷೆ ಉತ್ತರ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿ ಮಹಮ್ಮದ್ ನಿಸಾರ್‌ನನ್ನು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಈಚೆಗಷ್ಟೇ ಮೈಸೂರು ವಿವಿ ಪದವಿ ಪರೀಕ್ಷೆ ಸಂಬಂಧ ಉತ್ತರ ಪತ್ರಿಕೆ ಸೋರಿಕೆಯಾಗಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದ ಮಹಮ್ಮದ್ ನಿಸಾರ್ ತಲೆಮರಿಸಿಕೊಂಡಿದ್ದನು. ಈತನ ಬಳಿಯೇ ಕಾಲೇಜಿನ ಪ್ರಮುಖ ಬೀರು ಕೀಗಳು ಇತ್ತು ಎನ್ನಲಾಗಿದೆ. ಈತನೊಂದಿಗೆ ಇಬ್ಬರು ವಿದ್ಯಾರ್ಥಿಗಳು ಹಾಗೂ ಗುತ್ತಿಗೆ ನೌಕರ ಪರಾರಿಯಾಗಿದ್ದರು. ಸದ್ಯ ಸೋಮವಾರ ಆರೋಪಿ ನಿಸಾರ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಮಹಾರಾಣಿ ಕಾಲೇಜಿನಲ್ಲಿ ಮಹಜರು ನಡೆಸಿದ್ದಾರೆ. ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಲಾಕ್ ತೆರವಾದ ನಂತರ ಮತ್ತೆ ವಿಚಾರಣೆ: ಉತ್ತರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂ.22ರಂದು ವಿಚಾರಣೆ ನಡೆಸಲಾಗಿತ್ತು. ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರು, ಎಸ್‌ಡಿಎ ನೌಕರ ಮಹಮ್ಮದ್ ನಿಸಾರ್, ಗುತ್ತಿಗೆ ನೌಕರ ರಾಕೇಶ್, ಮೇಟಾಯಿ ಸಂಸ್ಥೆಯ ಮುಖ್ಯಸ್ಥ, ವಿದ್ಯಾರ್ಥಿಗಳಾದ ಚಂದನ್, ಚೇತನ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿತ್ತು. ಆದರೆ, ಪ್ರಾಂಶುಪಾಲರು ಹೊರತುಪಡಿಸಿ ಉಳಿದವರು ವಿಚಾರಣೆಗೆ ಹಾಜರಾಗಿರಲಿಲ್ಲ. ಲಾಕ್‌ಡೌನ್ ಪೂರ್ಣ ತೆರವಾದ ಬಳಿಕ ಮತ್ತೆ ವಿಚಾರಣೆ ನಡೆಸಲು ಉದ್ದೇಶಿಸ ಲಾಗಿದೆ ಎಂದು ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಪಿ.ಜ್ಞಾನಪ್ರಕಾಶ್ ತಿಳಿಸಿದ್ದಾರೆ.

ಹಿನ್ನೆಲೆ ಏನು?

ಇತ್ತೀಚೆಗಷ್ಟೇ ಮೈಸೂರಿನ ವಸತಿಗೃಹದಲ್ಲಿ ಮಹಮ್ಮದ್ ನಿಸಾರ್ ಎಂಬಾತ ಮೈವಿವಿ ಗುತ್ತಿಗೆ ನೌಕರ ಹಾಗೂ ಕೆಲ ವಿದ್ಯಾರ್ಥಿಗಳೊಂದಿಗೆ ಸೇರಿ ಬಿಎಸ್ಸಿ ರಸಾಯನಶಾಸ್ತ್ರ ವಿಜ್ಞಾನ ಉತ್ತರ ಪತ್ರಿಕೆ ಸಿದ್ಧಪಡಿಸುತ್ತಿದ್ದ ವೇಳೆ ಉತ್ತರ ಪತ್ರಿಕೆಯನ್ನು ಸೋರಿಕೆ ಮಾಡಲಾಗಿತ್ತು. ನಕಲಿ ಉತ್ತರ ಪತ್ರಿಕೆಯನ್ನು ಅಸಲಿ ಪತ್ರಿಕೆಯೊಂದಿಗೆ ಸೇರಿಸುವ ಸಂಚೂ ನಡೆದಿತ್ತು. ಈ ವೇಳೆ ದಾಳಿ ನಡೆಸಿದ ಮಂಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸದೆ ಆರೋಪಿಗಳನ್ನು ಬಿಟ್ಟು ಕಳುಹಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರು, ಮಂಡಿ ಠಾಣೆಯ ಇನ್ಸೆಪೆಕ್ಟರ್ ನಾರಾಯಣಸ್ವಾಮಿ ಸೇರಿದಂತೆ ಐವರು ಪೊಲೀಸರನ್ನು ಅಮಾನತುಗೊಳಿಸಿದ್ದರು.

× Chat with us