ಮೈಸೂರಲ್ಲಿ ಶೂಟೌಟ್‌ ಪ್ರಕರಣ| ಯಾರಿಗೋ ಹಾರಿಸಿದ ಗುಂಡು ಇನ್ಯಾರಿಗೋ ಬಿತ್ತು: ಮಗ ಸತ್ತಿರುವುದನ್ನೂ ಹೇಳಲಿಲ್ಲ- ತಂದೆ ಗೋಳು

ಮೈಸೂರು: ಜನನಿಬಿಢ ರಸ್ತೆಯಲ್ಲಿ ಸೋಮವಾರ ಹಾಡಹಗಲೇ ಚಿನ್ನಾಭರಣ ಮಾರಾಟ ಅಂಗಡಿಯೊಂದಕ್ಕೆ ನುಗ್ಗಿದ ನಾಲ್ವರು ದರೋಡೆಕೋರರ ತಂಡ, ಪಿಸ್ತೂಲ್‌ನಿಂದ ಬೆದರಿಸಿ ಅಂಗಡಿ ಮಾಲೀಕನ ಕೈಕಾಲು ಕಟ್ಟಿ ಹಾಕಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ್ದಲ್ಲದೇ ಪರಾರಿಯಾಗುವ ವೇಳೆ ಹಾರಿಸಿದ ಯುವಕನನ್ನು ಹತ್ಯೆ ಮಾಡಿರುವ ಮೃತಪಟ್ಟ ಘಟನೆ ಮೈಸೂರನ್ನೇ ಬೆಚ್ಚಿ ಬೀಳಿಸಿದೆ.

ವಿದ್ಯಾರಣ್ಯಪುರಂನ ಶಿವಾ ಗ್ಯಾಸ್ ಮುಂಭಾಗವಿರುವ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಪ್ಯಾಲೆಸ್ ಮಳಿಗೆಯಲ್ಲಿ ದುಷ್ಕೃತ್ಯ ಸಂಜೆ ನಡೆದಿದೆ. ಮೈಸೂರು ತಾಲೂಕು ದಡದಹಳ್ಳಿ ನಿವಾಸಿ ಚಂದ್ರು (24) ಎಂಬಾತ ಜೀವ ಕಳೆದುಕೊಂಡಾತ.

ಈ ರಸ್ತೆಯಲ್ಲಿ ನೂರಾರು ವಾಹನಗಳ ಓಡಾಟವಿದೆ. ಸಾಕಷ್ಟು ಜನರ ಸಂಚಾರವಿದೆ. ಹೀಗಿದ್ದರೂ ದುಷ್ಕರ್ಮಿಗಳು ಇಂತಹ ಸ್ಥಳವನ್ನು ದರೋಡೆಗೆ ಆಯ್ಕೆ ಮಾಡಿಕೊಂಡಿದ್ದಾದರೂ ಹೇಗೆ ಎಂಬ ಪ್ರಶ್ನೆ ಪೊಲೀಸರನ್ನು ಕಾಡುತ್ತಿದೆ.
ನಗರದಲ್ಲಿ ಪೊಲೀಸರಿಂದ ಶೂಟೌಟ್ ಪ್ರಕರಣಗಳು ನಡೆದ ಉದಾಹರಣೆಗಳಿವೆ. ಆದರೆ, ದರೋಡೆಕೋರರು ಗುಂಡು ಹಾರಿಸಿ ಓರ್ವನನ್ನು ಹತ್ಯೆಗೈದಿರುವ ಘಟನೆ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಇದೇ ಮೊದಲು. ಈ ಘಟನೆ ಸಾಂಸ್ಕೃತಿಕ ನಗರಿಯ ಜನರ ಆತಂಕಕ್ಕೆ ಕಾರಣವಾಗಿದೆ.

ಘಟನೆ ನಡೆದದ್ದು ಹೀಗೆ

ಸಂಜೆ 4.45ರಿಂದ 5.30ರ ಒಳಗೆ ವೇಳೆಯಲ್ಲಿ ಘಟನೆ ನಡೆದಿದೆ. ಚಿನ್ನಾಭರಣ ಮಳಿಗೆಗೆ ನುಗ್ಗಿದ ನಾಲ್ವರು ದುಷ್ಕರ್ಮಿಗಳು, ಮೊದಲಿಗೆ ಅಂಗಡಿಯ ರೋಲಿಂಗ್ ಶೆಟರ್‌ನ್ನು ಮುಚ್ಚಿದ್ದಾರೆ. ಘಟನೆಯಿಂದ ಕಂಗಾಲಾದ ಮಾಲೀಕ ಧರ್ಮೇಂದ್ರ ಕೂಗಲು ಮುಂದಾಗಿದ್ದಾರೆ. ಅಷ್ಟರಲ್ಲಿ ದುಷ್ಕರ್ಮಿಗಳು ಮಾಲೀಕನ ಕೈಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಮೂಲೆಯಲ್ಲಿ ಕೂರಿಸಿದ್ದಾರೆ. ನಂತರ ಮಳಿಗೆಯಲ್ಲಿದ್ದ ಚಿನ್ನದ ಆಭರಣ ಹಾಗೂ ಬೆಳ್ಳಿ ಪದಾರ್ಥಗಳನ್ನು ಬ್ಯಾಗ್‌ಗೆ ತುಂಬಲಾರಂಭಿಸಿದ್ದಾರೆ. ಈ ವೇಳೆ ಧರ್ಮೇಂದ್ರ ಅವರ ಚಿಕ್ಕಪ್ಪ ಶರತ್ ಚಂದ್ರ ಜೈನ್ ಅವರು ಮಳಿಗೆಯ ಬಳಿಗೆ ಬಂದಿದ್ದಾರೆ. ಮಳಿಗೆಯನ್ನು ಎಂದೂ ಮುಚ್ಚದವನು ಈಗ ಯಾಕೆ ಮುಚ್ಚಿದ್ದಾನೆ ಎಂಬ ಅನುಮಾನದಿಂದ ಅಂಗಡಿಯ ರೋಲಿಂಗ್ ಶೆಟರ್ ಅನ್ನು ತೆಗೆದಿದ್ದಾರೆ. ಇದರಿಂದ ಗಾಬರಿಗೊಂಡ ಆಗಂತುಕರು ತಕ್ಷಣವೇ ತಮ್ಮ ಬಳಿ ಇದ್ದ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾರೆ. ಆದರೆ, ಆ ಗುಂಡು ಗುರಿತಪ್ಪಿ ಮಳಿಗೆಯ ಮುಂದೆ ನಿಂತಿದ್ದ ಅಮಾಯಕ ದಡದಹಳ್ಳಿ ನಿವಾಸಿ ಚಂದ್ರು (23) ಅವರ ಹಣೆಗೆ ಬಡಿದಿದೆ. ಇದರಿಂದಾಗಿ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕೂಡಲೆ ದುಷ್ಕರ್ಮಿಗಳು ಪಿಸ್ತೂಲನ್ನು ಕೈನಲ್ಲಿ ಹಿಡಿದು ಓಡಿದ್ದಾರೆ.

ಮಾಲೀಕನ ಮೇಲೆ ಹಲ್ಲೆ

ಮಳಿಗೆಗೆ ನುಗ್ಗಿದ ದುಷ್ಕರ್ಮಿಗಳು ಮೊದಲಿಗೆ ಶೆಟರ್ ಅನ್ನು ಎಳೆದು ಮುಚ್ಚಿದ್ದಾರೆ. ನಂತರ ಮಾಲೀಕ ಧರ್ಮೇಂದ್ರ ಅವರ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ಅವರ ಮುಖ, ತುಟಿ, ಹಾಗೂ ದೇಹದ ಇನ್ನಿತರ ಭಾಗಗಳಿಗೆ ಗಾಯಗಳಾಗಿವೆ. ಪೊಲಿಸರು ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ

ಹಾಡಹಗಲೇ ಇಂತಹ ಘಟನೆ ನಡೆದಿದ್ದನ್ನು ಕಣ್ಣಾರೆ ಕಂಡ ಸ್ಥಳೀಯ ನಿವಾಸಿಗಳು ಹಾಗೂ ಅಕ್ಕಪಕ್ಕದ ಮಳಿಗೆಗಳ ಮಾಲೀಕರು ಸ್ಥಳದಲ್ಲಿ ಜಮಾಯಿಸಿದ್ದಾರೆ. ತಕ್ಷಣವೇ ವಿದ್ಯಾರಣ್ಯಪುರಂ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಜನರನ್ನು ನಿಯಂತ್ರಿಸಿದರು.

ಘಟನೆಯ ವಿವರ ಪಡೆದ ವಿದ್ಯಾರಣ್ಯಪುರಂ, ದೇವರಾಜ, ಅಶೋಕಪುರಂ, ಲಕ್ಷ್ಮಿಪುರಂ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ಗಳು ತಮ್ಮ ಸಿಬ್ಬಂದಿಯೊಡನೆ ಸಂಜೆ 5.45ರ ಹೊತ್ತಿಗೆ ಸ್ಥಳಕ್ಕೆ ಆಗಮಿಸಿದ್ದಾರೆ. ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಡಿಸಿಪಿ ಪ್ರದೀಪ್ ಗುಂಟಿ, ಗೀತಾ ಪ್ರಸನ್ನ, ಎಸಿಪಿ ಶರತ್‌ಚಂದ್ರ, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ವಲ್ಪ ಊರದಲ್ಲಿಯೇ ಅಂಗಿಯನ್ನು ದುಷ್ಕರ್ಮಿಗಳು ಎಸೆದು ಹೋಗಿರುವುದು ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸಿಸಿ ಕ್ಯಾಮರಾದಲ್ಲಿ ದಾಖಲು

ದರೋಡೆಕೋರರ ಸುಳಿವು ಪತ್ತೆ ಹಚ್ಚಲು ಪೊಲೀಸರು ಸ್ಥಳದಲ್ಲಿ ಸಿಸಿಟಿವಿ ಫೋಟೇಜನ್ನು ಪಡೆದುಕೊಂಡು, ಅಗಂತುಕರ ಸುಳಿವಿಗಾಗಿ ಸಾಮಾಜಿಕ ಜಾಲತಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಇದರಲ್ಲಿ ದರೋಡೆಕೋರರ ಮುಖ, ಚಿನ್ನಾಭರಣ ದೋಚುತ್ತಿರುವುದು ದಾಖಲಾಗಿದೆ. ಪೊಲೀಸರು ಸುತ್ತ ಮುತ್ತಲಿನ ಪ್ರದೇಶದಲ್ಲಿ ನಾಕಬಂಧಿ ಹಾಕಿ ಶೋಧಕಾರ್ಯ ನಡೆಸಿದರು. ದರೋಡೆ ಬಗ್ಗೆ ವಿದ್ಯಾರಣ್ಯಪುರಂ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದರೋಡೆಕೋರರ ಪತ್ತೆಗಾಗಿ ಮೊ. 9480802203, 9480802264, 9480802200 ಸಂಖ್ಯೆಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.

ಮಧ್ಯಾಹ್ನದ ನಂತರ ಬಾಗಿಲು ತೆರೆದರು

ಪತಿಯ ಮೇಲೆ ಹಲ್ಲೆ ನಡೆದ ವಿಚಾರ ತಿಳಿಯುತ್ತಿದ್ದಂತೆ ಧಮೇಂದ್ರ ಅವರ ಪತ್ನಿ ಸುನಿತಾ ಹಾಗೂ ಕುಟುಂಬದವರು ಸ್ಥಳಕ್ಕೆ ಬಂದಿದ್ದರು. ಈ ವೇಳೆ ಮಾತನಾಡಿದ ಸುನಿತಾ, ಮಕ್ಕಳಿಗೆ ಆರೋಗ್ಯ ಸರಿಯಿಲ್ಲದ ಕಾರಣ ಅವರನ್ನು ಬೆಳಿಗ್ಗೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಂತರ ಮಧ್ಯಾಹ್ನ 1.30ಕ್ಕೆ ಮಳಿಗೆಯ ಬಾಗಿಲು ತೆರೆಯಲಾಗಿತ್ತು. ಸಂಜೆ 5 ಗಂಟೆಗೆ ಚಹ ತರಲು ಧಮೇಂದ್ರ ಅವರ ಮೊಬೈಲ್‌ಗೆ ಕರೆ ಮಾಡಿದೆ. ಎರಡು ಬಾರಿ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ. ಮಳಿಗೆಯಲ್ಲಿ ಗ್ರಾಹಕರಿರಬೇಕು ಎಂದು ಸುಮ್ಮನಾದೆ. ನಂತರ ನನ್ನ ಭಾವನವರು ವಿಚಾರ ತಿಳಿಸಿದರು ಎಂದು ಕಣ್ಣೀರಾದರು.

ಅವರು ನನ್ನ ಮೇಲೆ ಗುರಿ ಇರಿಸಿದ್ದರು

ಮಳಿಗೆಯ ಶೆಟರ್ ತೆರೆದ ಶರಶ್ಚಂದ್ರ ಜೈನ್ ಅವರು ಈ ಮಾತು ಹೇಳುವಾಗ ಭಯ ಕಣ್ಣಲ್ಲಿ ತುಂಬಿತ್ತು.

ಸಂಜೆ 5.30ರ ವೇಳೆಗೆ ಮನೆಯಿಂದ ಮಳಿಗೆಯ ಬಳಿಗೆ ಬಂದೆ. ಮಳಿಗೆಗೆ ಬೀಗ ಹಾಕಿರಲಿಲ್ಲ. ಆದರೆ, ಮುಚ್ಚಿತ್ತು. ಇದರಿಂದ ಅನುಮಾನಗೊಂಡು ಮಳಿಗೆಯನ್ನು ತೆರೆದೆ. ಕೂಡಲೇ ಅವರಲ್ಲಿ ಒಬ್ಬ ನನ್ನನ್ನು ಗುರಿಯಾಗಿಸಿ ಗುಂಡು ಹಾರಿಸಿದ. ಅದು ಗುರಿತಪ್ಪಿ ಮಳಿಗೆಯ ಮುಂದೆ ನಿಂತಿದ್ದ ಯುಕನ ಮೇಲೆ ಬಿದ್ದಿದೆ ಎಂದು ಆತಂಕದಿಂದಲೇ ನುಡಿದರು.

ನನ್ನ ಮಗ ಸತ್ತಿರುವುದನ್ನು ಹೇಳಲಿಲ್ಲ

ಇದು ಘಟನೆಯಲ್ಲಿ ಮೃತಪಟ್ಟ ಚಂದ್ರ ಅವರ ತಂದೆ ರಂಗಸ್ವಾಮಿ ಅವರ ಮಾತು. ನನ್ನ ಮಗ ಗಾರೆ ಕೆಲಸ ಮಾಡುತ್ತಾನೆ. ಸೋಮವಾರ ಬೆಳಿಗ್ಗೆ ತಾಯಿಯೊಂದಿಗೆ ದೇವಾಲಯಕ್ಕೆ ತೆರಳಿದ್ದನು. ನಂತರ ತನ್ನ ಕಿವಿಗೆ ಓಲೆ ತರುವ ಸಲುವಾಗಿ ಚಿಕ್ಕಪ್ಪನ ಜತೆ ವಿದ್ಯಾರಣ್ಯಪುರಂಗೆ ಬಂದಿದ್ದ. ಸಂಜೆ 6 ಗಂಟೆ ಸುಮಾರಿಗೆ ಪೊಲೀಸರು ನನಗೆ ದೂರವಾಣಿ ಕರೆ ಮಾಡಿ ಬರಲು ಹೇಳಿದರು. ಕಾರಣ ಕೂಡ ಹೇಳಲಿಲ್ಲ. ಇದೀಗ ನನ್ನ ಮಗ ಗುಂಡೇಟಿನಿಂದ ಮೃತಪಟ್ಟಿದ್ದಾನೆ ಎಂಬುದು ಗೊತ್ತಾಯಿತು. ನನ್ನ ಮಗನನ್ನು ನಂಬಿ ಜೀವನ ಸಾಗಿಸುತ್ತಿದ್ದೆವು. ಮುಂದೇನೂ ಎಂಬುದು ತೋಚುತ್ತಿಲ್ಲ ಎಂದು ಗದ್ಗದಿತರಾದರು.

ʻಮೈಸೂರು ನಗರದಲ್ಲಿ ನಡೆದಿರುವ ಘಟನೆಯಿಂದ ನಮಗೆ ಏನು ಮಾತನಾಡಬೇಕು ಎನ್ನುವುದು ತೋಚದಂತಾಗಿದೆ. ಮುಕ್ತವಾದ ಜಾಗದಲ್ಲಿ ಜ್ಯುವೆಲ್ಲರಿ ಅಂಗಡಿಗಳನ್ನು ನಡೆಸುವುದಕ್ಕೆ ಭಯ ಶುರುವಾಗಿದೆ. ಪೊಲೀಸರು ಆಗಿಂದಾಗ್ಗೆ ಬಂದು ಜ್ಯುಯೆಲ್ಲರಿ ಷಾಪ್‌ಗಳನ್ನು ನೋಡಬೇಕು. ವಾಚ್ ಮಾಡಬೇಕು. ದಿನಕ್ಕೊಂದು ಸಾರಿ ಗಸ್ತು ಮಾಡಿದರೆ ಇಂತಹ ಕೃತ್ಯ ಮಾಡುವವರಿಗೂ ಹೆದರಿಕೆ ಬರಲಿದೆ. ಮಾಲೀಕರಿಗೆ ಸ್ವಲ್ಪ ಧೈರ್ಯ ಬರಲಿದೆ. ಈ ಕೃತ್ಯ ಎಸಗಿದವರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಇಂತಹ ಪ್ರಕರಣ ಮತ್ತೆ ಮರುಕಳಿಸದಂತೆ ಗಮನಹರಿಸಿ ಕ್ರಮ ಕೈಗೊಳ್ಳಬೇಕುʼ.

– ಬಿ.ಜಿ.ವೆಂಕಟೇಶ್, ಮಾಲೀಕರು, ಪ್ರಗತಿ ಜ್ಯುವೆಲ್ಲರಿ.

ʻಈಗಷ್ಟೇ ವಿಚಾರ ಗೊತ್ತಾಗಿದೆ. ಸಂಪೂರ್ಣ ಮಾಹಿತಿ ಗೊತ್ತಿಲ್ಲ. ಜ್ಯುವೆಲ್ಲರಿ ಅಂಗಡಿಗಳ ಮೇಲೆ ದುಷ್ಕರ್ಮಿಗಳ ಕಣ್ಣು ಸದಾ ಬಿದ್ದಿರುತ್ತದೆ. ಪೊಲೀಸರು ಆಗಿಂದಾಗ್ಗೆ ಬೀಟ್ ಮಾಡಿದರೆ, ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾ ಇಟ್ಟರೆ ಇಂತಹ ದುರಂತ ತಪ್ಪಿಸಬಹುದು. ಯಾವುದೇ ಅಂಗಡಿಯಲ್ಲಿ ದರೋಡೆ ಮಾಡಲು ಮುಂದಾದರೆ ಮಾಲೀಕರು ವ್ಯಾಪಾರ ಮಾಡುವುದು ಕಷ್ಟವಾಗಲಿದೆʼ.

– ಸಂಜಯ್‌ಗುಪ್ತ, ಮಾಲೀಕರು, ಕಿರಣ್ ಜ್ಯುವೆಲ್ಲರಿ.

ʻಸಂಜೆ 5 ಗಂಟೆ ವೇಳೆ ಘಟನೆ ನಡೆದಿದೆ. ಪ್ರಕರಣದ ತನಿಖೆಗಾಗಿ ತಂಡವನ್ನು ರಚಿಸಲಾಗುತ್ತದೆ. ಪೊಲೀಸರು ಈಗಾಗಲೇ ಎಲ್ಲ ಆಯಾಮಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಸಿಸಿ ಟಿವಿ ಫೂಟೇಜ್ ಸಿಕ್ಕಿದೆ. ಆದಷ್ಟು ಶೀಘ್ರವಾಗಿ ದುಷ್ಕರ್ಮಿಗಳನ್ನು ಬಂಧಿಸಲಾಗುತ್ತದೆʼ.

-ಡಾ.ಚಂದ್ರಗುಪ್ತ, ನಗರ ಪೊಲೀಸ ಆಯುಕ್ತ

× Chat with us