ಮತ್ತೊಂದು ಜ್ಯುವೆಲರ್ಸ್‌ ಮಳಿಗೆ ಮಾಲೀಕನಿಂದಲೇ ದರೋಡೆಗೆ ಸುಪಾರಿ: ದುಷ್ಕೃತ್ಯಕ್ಕೆ ವೃತ್ತಿ ವೈಷಮ್ಯವೇ ಕಾರಣವಾಯ್ತು!

ಮೈಸೂರು: ವಿದ್ಯಾರಣ್ಯಪುರಂನಲ್ಲಿ ನಡೆದ ದರೋಡೆ ಪ್ರಕರಣದ ಪ್ರಮುಖ ಸೂತ್ರಧಾರ ಮೈಸೂರಿನವನು. ಆತ ನೀಡಿದ ಮಾಹಿತಿ ಹಾಗೂ ಮಾರ್ಗದರ್ಶನದಿಂದಲೇ ಕೃತ್ಯ ನಡೆದಿದೆ. ವೃತ್ತಿ ವೈಷಮ್ಯದಿಂದ ಸಂಚು ರೂಪಿಸಿದ್ದ ಆತ ಅಲ್ಲಿ ದರೋಡೆ ನಡೆಸಿದರೆ ಸಾಕಷ್ಟು ಚಿನ್ನಾಭರಣ ದೋಚಬಹುದು ಎಂದು ಖದೀಮರಿಗೆ ಹೇಳಿಕೊಟ್ಟಿದ್ದಾನೆ. ದರೋಡೆ ನಂತರ ಹೇಗೆ ತಪ್ಪಿಸಿಕೊಳ್ಳಬೇಕು ಎಂಬದನ್ನೂ ಹೇಳಿಕೊಟ್ಟಿದ್ದನು.

ಪ್ರಕರಣದ ಖಳನಾಯಕ ನಗರದ ಮಹದೇವಪುರ ರೈಲ್ವೇ ಗೇಟ್ ಬಳಿ ಇರುವ ಬಾಲಾಜಿ ಬ್ಯಾಂಕರ್ಸ್‌ ಅಂಡ್ ಜ್ಯೂವೆಲರ್ಸ್‌ ಮಳಿಗೆಯ ಮಾಲೀಕ ಮಹೇಂದ್ರ.

ಯಾವುದೇ ಅಪರಾಧ ಪ್ರಕರಣ ನಡೆದರೂ ಪೊಲೀಸರು ನಡೆಸುವ ಮೊದಲ ಕಾರ್ಯಾಚರಣೆಯೆ ಮೊಬೈಲ್ ಟವರ್ ಲೊಕೇಷನ್ ಹುಡುಕಾಟ. ಅದರಂತೆ ಈ ದರೋಡೆ ಪ್ರಕರಣದಲ್ಲಿ ಮೊಬೈಲ್ ಟವರ್ ಲೊಕೇಷನ್ ಪರಿಶೀಲಿಸಿದಾಗ ಮಹೇಂದ್ರನ ಮೊಬೈಲ್ ಸಂಖ್ಯೆ ಅಲ್ಲಿ ದಾಖಲಾಗಿತ್ತು. ಇದರ ಆಧಾರದಲ್ಲಿ ಕಾರ್ಯಾಚರಣೆ ಆರಂಭಿಸಿದ ಪೊಲಿಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಪ್ರಕರಣದ ತನಿಖೆ ನಡೆಸುತ್ತಿದ್ದ ಇನ್‌ಸ್ಪೆಕ್ಟರ್‌ಗೆ ಈತನ ಮುಖ ಕಂಡ ಕೂಡಲೇ ಪ್ರಕರಣವನ್ನೇ ಭೇದಿಸಿದಷ್ಟು ಸಂತಸವಾಗಿದೆ. ಏಕೆಂದರೆ ಆತ ಈ ಹಿಂದೆ ವಂಚನೆ ಪ್ರಕರಣವೊಂದರಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ.

ಪೊಲೀಸರು ತೀವ್ರ ವಿಚಾರಣೆಗೆ ಮುಂದಾಗುವ ಮುನ್ನವೇ ಆತ ನಡೆದ ವಿಷಯವನ್ನು ಕಕ್ಕಿದ್ದಾನೆ. ಆತ ನೀಡಿದ ಮಾಹಿತಿಯನ್ವಯ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರ ಮಾರ್ಗದರ್ಶನದಲ್ಲಿ 120 ಮಂದಿಯ ಪರಿಣಿತರ ತಂಡ ರಾಜಾಸ್ಥಾನ್, ಪಶ್ಚಿಮಬಂಗಾಳ, ಮುಂಬೈ, ಜಮ್ಮು ಕಾಶ್ಮೀರಕ್ಕೆ ತೆರಳಿ ಕೇವಲ ಮೂರು ದಿನಗಳಲ್ಲಿ ಪ್ರಕರಣವನ್ನು ಭೇದಿಸಿದ್ದಾರೆ.

ಬುಡ್ಡ ಮುಂಬೈ ಸಿಕ್ಕಿಲ್ಲ: ಮಹೇಂದ್ರ ಸೇರಿದಂತೆ ರಾಜಾಸ್ಥಾನ್, ಪಶ್ಚಿಮಬಂಗಾಳ, ಮುಂಬೈ, ಜಮ್ಮು ಕಾಶ್ಮೀರದ ನಿವಾಸಿಗಳಾದ ಬಟ್ಟಿ, ಚಾಂಡಿಯನ್, ತೌಸೀಫ್, ವಿಜಯ್, ಮದನ್‌ಸಿಂಗ್, ಮಸ್ಕಾನ್‌ನನ್ನು ಬಂಧಿಸಿದ್ದು, ಸುಮಾರು 55 ವರ್ಷ ವಯಸ್ಸಿನ ಹಾಗೂ ಅಪರಾಧ ಹಿನ್ನೆಲೆಯುಳ್ಳ ಮುಂಬೈ ಮೂಲದ ಬುಡ್ಡ ತಲೆಮರೆಸಿಕೊಂಡಿದ್ದಾನೆ.

12 ದಿನ ಪೊಲೀಸ್ ವಶಕ್ಕೆ: ಪೊಲೀಸರು ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ವಿಚಾರಣೆಗಾಗಿ 12 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಮತ್ತಷ್ಟು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ ಇದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಎರಡು ಮಳಿಗೆಗಳನ್ನು ಗುರುತು ಮಾಡಿದ್ದರು

ಆರೋಪಿಗಳು ಒಂದು ತಿಂಗಳ ಹಿಂದೆಯೇ ಮೈಸೂರಿಗೆ ಬಂದಿದ್ದರು. ಅವರೊಂದಿಗೆ ನಗರದಲ್ಲಿ ಸುತ್ತಾಡಿದ್ದ ಮಹೇಂದ್ರ ಅಂತಿಮವಾಗಿ ವಿದ್ಯಾರಣ್ಯಪುರಂನ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಪ್ಯಾಲೆಸ್ ಮಳಿಗೆಯಲ್ಲಿ ಕಳವು ಮಾಡಬಹುದು ಎಂದು ತಿಳಿಸಿದ್ದ. ಅದರಂತೆ ಆ.22ರಂದೇ ಮೈಸೂರಿಗೆ ಆಗಮಿಸಿದ ಆರೋಪಿಗಳು ಬಸ್ ಹಾಗೂ ರೈಲ್ವೇ ನಿಲ್ದಾಣದಲ್ಲಿ ಅಡ್ಡಾಡಿಕೊಂಡು ರಾತ್ರಿ ಕಳೆದಿದ್ದರು. ನಂತರ ಆ.23ರಂದು ಬೆಳಿಗ್ಗೆ ವಿದ್ಯಾರಣ್ಯಪುರಂನ 16ನೇ ಕ್ರಾಸ್‌ನಲ್ಲಿದ್ದ ಚಿನ್ನಾಭರಣ ಮಳಿಗೆಯೊಂದಕ್ಕೆ ತೆರಳಿದ್ದಾರೆ. ಅಲ್ಲಿಯೇ ದರೋಡೆ ಮಾಡಲು ನಿರ್ಧರಿಸಿದ್ದಾರೆ. ಆದರೆ, ಆ ಮಳಿಗೆ ಮಾಲೀಕ ಚಪ್ಪಲಿ ಹಾಕಿಕೊಂಡು ಒಳಗೆ ಬರಬೇಡಿ ಎಂದಿದ್ದಾನೆ. ಇದರಿಂದ ಮಳಿಗೆ ಮಾಲೀಕ ಹಾಗೂ ದುಷ್ಕರ್ಮಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಕೃತ್ಯಕ್ಕೆ ತೊಡಕಾಗಿ ಆರೋಪಿಗಳು ಅಲ್ಲಿಂದ ವಾಪಸ್ ಆಗಿದ್ದಾರೆ. ನಂತರ ವಿದ್ಯಾರಣ್ಯಪುರಂನ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಪ್ಯಾಲೆಸ್ ಮಳಿಗೆಗೆ ಬಂದು ದರೋಡೆ ಮಾಡಿದ್ದಾರೆ.

ದರೋಡೆ ನಂತರ ಆಟೋ ಹತ್ತಿ ಪರಾರಿ

ದರೋಡೆ ನಂತರ ಆರೋಪಿಗಳು ವಿದ್ಯಾರಣ್ಯಪುರಂನ ಮೂರು ರಸ್ತೆಗಳಲ್ಲಿ ಓಡಿ ತಪ್ಪಿಸಿಕೊಂಡಿದ್ದಾರೆ. ನಂತರ ಆಟೋ ಮೂಲಕ ಬಸ್ ನಿಲ್ದಾಣ ತಲುಪಿದ್ದಾರೆ. ಅಲ್ಲಿಂದ ಬೆಂಗಳೂರಿಗೆ ತೆರಳಿ ಒಂದೇ ದಿನದಲ್ಲಿ ಆರೋಪಿಗಳು ವಿವಿಧ ರಾಜ್ಯಗಳಿಗೆ ಚದುರಿ ಹೋಗಿದ್ದಾರೆ.

 

× Chat with us