ರಾಜ ಕಾಲುವೆ ಒತ್ತುವರಿ ಆರೋಪ: ಮೈಸೂರು ಡಿಸಿಯಿಂದ ಇಂದು ವರದಿ ಸಲ್ಲಿಕೆ

(ಸಾಂದರ್ಭಿಕ ಚಿತ್ರ)

ಮೈಸೂರು: ನಗರದ ದಟ್ಟಗಳ್ಳಿ ರಿಂಗ್ ರಸ್ತೆಯಲ್ಲಿ ರಾಜ ಕಾಲುವೆ ಒತ್ತುವರಿ ಮಾಡಿಕೊಂಡು ಕಲ್ಯಾಣಮಂಟಪ ನಿರ್ಮಿಸಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಪರಶೀಲನೆಗೆ ನಿಯೋಜಿಸಿದ್ದ ತಂಡ ಸರ್ವೆ ನಡೆಸಿ ಸಂಗ್ರಹಿಸಿರುವ ವರದಿಯನ್ನು ಪ್ರಾದೇಶಿಕ ಆಯುಕ್ತರಿಗೆ ಜಿಲ್ಲಾಧಿಕಾರಿಗಳ ಮೂಲಕ ಸೋಮವಾರ ವರದಿ ಸಲ್ಲಿಸಲಾಗುತ್ತದೆ. ಹೀಗಾಗಿ, ಜಿಲ್ಲಾಡಳಿತದ ಮೂಲಕ ಸಲ್ಲಿಕೆಯಾಗುವ ವರದಿಯು ಪ್ರಾದೇಶಿಕ ಆಯುಕ್ತರಿಗೆ ಸೇರಿದ ಬಳಿಕ ಯಾವುದೇ ಕ್ಷಣದಲ್ಲಿ ಬಹಿರಂಗವಾಗುವ ಸಾಧ್ಯತೆ ಇದೆ.

ಶುಕ್ರವಾರ ಅಪರ ಜಿಲ್ಲಾಧಿಕಾರಿ ಬಿ.ಎನ್.ಮಂಜುನಾಥಸ್ವಾಮಿ ಅವರ ನೇತೃತ್ವದಲ್ಲಿ ಉಪ ವಿಭಾಗಾಧಿಕಾರಿ ವೆಂಕಟರಾಜು, ತಹಸಿಲ್ದಾರ್ ರಕ್ಷಿತ್, ಭೂ ಮಾಪನ ಇಲಾಖೆ ಜಂಟಿ ನಿರ್ದೇಶಕರು ಸರ್ವೆ ಕಾರ್ಯ ನಡೆಸಿದ್ದರು. ಶನಿವಾರ ಕಂದಾಯ ಇಲಾಖೆ, ಭೂ ದಾಖಲೆಗಳ ವಿಭಾಗದಲ್ಲಿರುವ ಹಲವಾರು ಮೂಲ ದಾಖಲೆಗಳನ್ನು ಪರಿಶೀಲಿಸಿ ಮಾಹಿತಿ ಪಡೆದುಕೊಂಡಿದ್ದರು.

ಮುಡಾ ಭೂ ಸ್ವಾಧೀನ ಮಾಡುವ ಜಮೀನು ಯಾರ ಹೆಸರಿನಲ್ಲಿತ್ತು, ನಂತರ ಯಾರಿಗೆ ನಿವೇಶನ ಮಂಜೂರಾಗಿದೆ, ರಾಜ ಕಾಲುವೆ ಯಾವ ಮಾರ್ಗದಲ್ಲಿ ಹಾದು ಹೋಗಿದೆ ಎಂಬುದರ ಬಗ್ಗೆ ಪರಿಶೀಲಿಸಿ ಸರ್ವೆ ವರದಿ ತಯಾರಿಸಿದ್ದರು. ಅದರಂತೆ, ಮುಚ್ಚಿದ ಲಕೋಟೆಯಲ್ಲಿ ಕಂದಾಯ ಮತ್ತು ಭೂಮಾಪನ ಇಲಾಖೆ ಅಧಿಕಾರಿಗಳು ಪ್ರಾದೇಶಿಕ ಆಯುಕ್ತರಿಗೆ ವರದಿ ಸಲ್ಲಿಸಿ ಬಂದಿದ್ದರು. ಆದರೆ, ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್ ಅವರು ಅಪರ ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಕೆಯಾದ ವರದಿಯನ್ನು ಸ್ವೀಕರಿಸದೆ ತಾವು ನೇರವಾಗಿ ಸಲ್ಲಿಸುವ ಬದಲು ಜಿಲ್ಲಾಧಿಕಾರಿಗಳ ಮೂಲಕ ಬರಬೇಕಾಗಿದೆ. ಹೀಗಾಗಿ, ಸೋಮವಾರ ಜಿಲ್ಲಾಧಿಕಾರಿಗಳಿಂದಲೇ ಅಧಿಕೃತವಾಗಿ ಸಲ್ಲಿಸಿದರೆ ಉತ್ತಮವೆಂದು ಹೇಳಿ ವರದಿಯನ್ನು ವಾಪಸ್ ಕಳುಹಿಸಿದ್ದಾರೆ. ಹೀಗಾಗಿ, ಸರ್ವೆ ವರದಿಯನ್ನು ಪ್ರಾದೇಶಿಕ ಆಯುಕ್ತರಿಂದ ಪಡೆದು ಡಿಸಿ ಡಾ.ಬಗಾದಿ ಗೌತಮ್ ಅವರಿಗೆ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಗಳು ಪರಿಶೀಲಿಸಿ ತಮ್ಮ ಟಿಪ್ಪಣಿ ಬರೆದು ಆರ್‌ಸಿಗೆ ನೇರವಾಗಿ ಸಲ್ಲಿಸಲಿದ್ದಾರೆ ಎಂದು ಹೇಳಲಾಗಿದೆ.

ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳೇ ಸುಪ್ರೀಂ ಆಗಿದ್ದು, ಪ್ರಾದೇಶಿಕ ಆಯುಕ್ತರಿಗೆ ಯಾವುದೇ ವರದಿ ಸಲ್ಲಿಕೆಯಾಗಬೇಕಾದರೆ ಜಿಲ್ಲಾಧಿಕಾರಿಗಳ ಮೂಲಕ ರವಾನೆಯಾಗಬೇಕಾಗಿದೆ. ಹೀಗಾಗಿ, ಅಪರ ಜಿಲ್ಲಾಧಿಕಾರಿಗಳಿಂದ ವರದಿ ಪಡೆಯದೆ ಜಿಲ್ಲಾಧಿಕಾರಿಗಳಿಂದ ಪಡೆಯುತ್ತೇನೆಂದು ಹೇಳಿ ವಾಪಸ್ ಕಳುಹಿಸಿರುವುದು ಗಮನಾರ್ಹವಾಗಿದೆ. ಏಕೆಂದರೆ ಭೂ ಒತ್ತುವರಿ, ಅಕ್ರಮ ತೆರವಿನ ವಿಚಾರದಲ್ಲಿ ಕ್ರಮಕೈಗೊಳ್ಳುವ ಪರಮಾಧಿಕಾರಿ ಜಿಲ್ಲಾಧಿಕಾರಿಗಳಿಗೆ ಸೇರಿರುವುದರಿಂದ ಆರ್‌ಸಿ ಅವರು ಕೈಗೊಳ್ಳುವ ಮುಂದಿನ ನಿರ್ಧಾರ ಹಲವು ಕುತೂಹಲ ಮೂಡಿಸಿದೆ.

ʻಶಾಸಕ ಸಾ.ರಾ.ಮಹೇಶ್ ಅವರು ದೂರು ನೀಡಿದ ಹಿನ್ನೆಲೆಯಲ್ಲಿ ರಾಜ ಕಾಲುವೆ ಬಗ್ಗೆ ಸರ್ವೆ ನಡೆಸಿ ನೈಜ ಸ್ಕೆಚ್ ವರದಿಯನ್ನು ಸಲ್ಲಿಸುವಂತೆ ಹೇಳಿದ್ದೆ. ಸರ್ವೆ ಬಿಟ್ಟರೆ ಬೇರೆ ಯಾವುದೇ ತನಿಖೆಗೂ ಆದೇಶ ನೀಡಿಲ್ಲ. ಒಬ್ಬರನ್ನು ನೇಮಿಸಿದರೆ ಸರಿಯಾಗುವುದಿಲ್ಲವೆಂದು ಏಳು ಜನರ ಕಮಿಟಿಯನ್ನು ರಚಿಸಿ ಸರ್ವೆ ನಡೆಸಲು ಸೂಚನೆ ನೀಡಿದ್ದೆ. ಸರ್ವೆ ವರದಿಯನ್ನು ನನಗೊಂದು ಮತ್ತು ದೂರುದಾರರಾಗಿರುವ ಸಾ.ರಾ.ಮಹೇಶ್ ಅವರಿಗೂ ಒಂದು ಪ್ರತಿ ಕೊಡುವಂತೆ ಹೇಳಿದ್ದೇನೆ.ʼ

-ಜಿ.ಸಿ.ಪ್ರಕಾಶ್, ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ

× Chat with us