ಮೈಸೂರು ನಗರಪಾಲಿಕೆ ಉಪ ಚುನಾವಣೆ: ತ್ರಿಕೋನ ಸ್ಪರ್ಧೆಗೆ ಅಣಿ

ಮೈಸೂರು: ಮೈಸೂರು ಮಹಾನಗರಪಾಲಿಕೆಯಲ್ಲಿ ತೆರವಾಗಿರುವ 36ನೇ ವಾರ್ಡಿನ ಹಿಂದುಳಿದ ವರ್ಗ-ಬಿ ಸದಸ್ಯ ಸ್ಥಾನಕ್ಕೆ ಸೆ.3ರಂದು ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಸೋಮವಾರ ಕೊನೆಯ ದಿನವಾಗಿದೆ.

ಈಗಾಗಲೇ ಕಾಂಗ್ರೆಸ್, ಜಾ.ದಳ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ್ದು, ಬಿಜೆಪಿ ಅಳೆದು ತೂಗಿ ತೀವ್ರ ಪೈಪೋಟಿ ನೀಡುವಂತಹ ಬಲಿಷ್ಠ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತಯಾರಿ ಮಾಡಿಕೊಂಡಿದೆ. ಸೆ.3ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿರುವ ಸೋಮವಾರ ಕಾಂಗ್ರೆಸ್, ಜಾ.ದಳ ಹಾಗೂ ಬಿಜೆಪಿ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸುವ ಮೂಲಕ ತ್ರಿಕೋನ ಸ್ಪರ್ಧೆಗೆ ಅಣಿಯಾಗಿವೆ.

2018ರಲ್ಲಿ ಆಯ್ಕೆಯಾಗಿದ್ದ ಜಾ.ದಳದ ಸದಸ್ಯೆ ರುಕ್ಮಿಣಿ ಮಾದೇಗೌಡ ಅವರು ಚುನಾವಣಾ ಆಯೋಗಕ್ಕೆ ಆಸ್ತಿ ವಿವರ ಸಲ್ಲಿಸುವಾಗ ತಪ್ಪು ಮಾಹಿತಿ ನೀಡಿದ್ದಾರೆಂದು ಕೋರ್ಟ್ ಸದಸ್ಯತ್ವವನ್ನು ಅಸಿಂಧುಗೊಳಿಸಿ ಆದೇಶ ನೀಡಿದ್ದರು. ರುಕ್ಮಿಣಿ ಅವರು ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರೆ ಕಾನೂನು ತೊಡಕುಗಳು ಉಂಟಾಗಿ ಪರಿಶೀಲನೆ ವೇಳೆ ತಿರಸ್ಕಾರವಾದರೆ ಎನ್ನುವ ಕಾರಣಕ್ಕಾಗಿ ಮಾದೇಗೌಡರ ಸಹೋದರನ ಪತ್ನಿ ಎಸ್.ಲೀಲಾವತಿ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದ್ದು, ಪಕ್ಷ ಅಧಿಕೃತವಾಗಿ ಟಿಕೆಟ್ ಘೋಷಿಸಿದೆ.

ಅದೇ ರೀತಿ ಪರಾಜಿತ ಅಭ್ಯರ್ಥಿ ಸಿ.ಎಸ್.ರಜನಿ ಅಣ್ಣಯ್ಯ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಅಂತ ಪ್ರಕಟಿಸಿ ಬಿ- ಫಾರಂ ನೀಡಿದೆ. ಬಿಜೆಪಿಯಲ್ಲಿ ಟಿಕೆಟ್ ಪಡೆಯಲು ಐವರು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಯಾವುದೇ ಕ್ಷಣದಲ್ಲಿ ಹೆಸರು ಅಂತಿಮಗೊಳಿಸುವ ಸಾಧ್ಯತೆ ಇದೆ.

ಒಂದು ಸುತ್ತಿನ ಪ್ರಚಾರ: ಉಪ ಚುನಾವಣೆ ನಡೆಯುವುದು ಖಚಿತ ಎನ್ನುವುದನ್ನು ಮೊದಲೇ ನಿರೀಕ್ಷಿಸಿದ್ದ ಸಿ.ಎಸ್.ರಜನಿ ಈಗಾಗಲೇ ಒಂದು ಸುತ್ತಿನ ಪ್ರಚಾರ ಮುಗಿಸಿದ್ದಾರೆ. ಈ ವಾರ್ಡಿನಲ್ಲಿ ಮೂರನೇ ಬಾರಿಗೆ ಸ್ಪರ್ಧಿಸುತ್ತಿರುವ ಸಿ.ಎಸ್.ರಜನಿ ಕಳೆದ ಬಾರಿ ಅತ್ಯಲ್ಪ ಮತಗಳ ಅಂತರದಿಂದ ಪರಾಭವಗೊಂಡರೂ ವಿಜೇತ ಅಭ್ಯರ್ಥಿ ವಿರುದ್ಧ ಕಾನೂನು ಸಮರ ನಡೆಸುವ ಮೂಲಕ ಸಕ್ರಿಯವಾಗಿದ್ದರ ಫಲವಾಗಿ ಕಾಂಗ್ರೆಸ್ ಟಿಕೆಟ್ ಕೊಡಲು ಕಾರಣವಾಗಿದೆ. ಇದಲ್ಲದೆ, ಶಾಸಕ ತನ್ವೀರ್‌ಸೇಠ್ ಕೂಡ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಕೆಲಸ ಮಾಡುವುದರಿಂದ ಮುಂದೆ ಜಾ.ದಳ ಹಾಗೂ ಬಿಜೆಪಿ ಅಭ್ಯರ್ಥಿಗಳ ಪರವಾಗಿ ನಾಯಕರು ಪ್ರಚಾರದ ಕಣಕ್ಕೆ ಇಳಿಯುವುದು ಗ್ಯಾರಂಟಿಯಾಗಿದೆ.

ಮಾದೇಗೌಡರಿಗೆ ಬಿಗ್ ಶಾಕ್: ಶ್ರೀರಾಂಪುರ ಜಿಪಂ ಸದಸ್ಯರಾಗಿದ್ದ ಮಾದೇಗೌಡರು ತಮ್ಮ ಪತ್ನಿಯನ್ನು ನಗರಪಾಲಿಕೆ ಚುನಾವಣೆಯಲ್ಲಿ ಗೆಲ್ಲಿಸಿಕೊಂಡಿದ್ದರು. ಸಾಮಾನ್ಯ ವರ್ಗಕ್ಕೆ ಮಹಾಪೌರ ಸ್ಥಾನ ಮೀಸಲಾಗಿದ್ದರಿಂದ ತಮ್ಮ ಪತ್ನಿಯನ್ನು ಮಹಾಪೌರರನ್ನಾಗಿ ಆಯ್ಕೆ ಮಾಡಿಸುವಂತೆ ನೋಡಿಕೊಂಡಿದ್ದರು. ಆದರೆ, ಮೂರೇ ತಿಂಗಳಿಗೆ ಮಹಾಪೌರ ಸ್ಥಾನ ಕಳೆದುಕೊಳ್ಳುವ ಜತೆಗೆ ಸದಸ್ಯತ್ವವೂ ಹೋಯಿತು. ಮುಂದೆ ಜಿಪಂ ಚುನಾವಣೆಗೆ ಸ್ಪರ್ಧಿಸಬೇಕು ಅಂದರೆ ಕ್ಷೇತ್ರವೇ ರದ್ದಾಗಿದ್ದು, ಶ್ರೀರಾಂಪುರ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೇಗೇರಿದೆ.

ಜಿಟಿಡಿ ಬೆಂಬಲ ಕೋರಿದ ರಜನಿ: ಕಾಂಗ್ರೆಸ್ ಅಭ್ಯರ್ಥಿ ರಜನಿ ಅಣ್ಣಯ್ಯ ಅವರು ಬಿ- ಫಾರಂ ಸಿಗುತ್ತಿದ್ದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಚಾಮುಂಡೇಶ್ವರಿ ಕ್ಷೇತ್ರದ ಹಾಲಿ ಶಾಸಕ ಜಿ.ಟಿ.ದೇವೇಗೌಡ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಜಿಪಂ ಸದಸ್ಯ ಮಾದೇಗೌಡ ಮತ್ತು ಜಿ.ಟಿ.ದೇವೇಗೌಡ ಅವರ ನಡುವಿನ ಸಂಬಂಧ ಅಷ್ಟಾಗಿಲ್ಲದ ಕಾರಣ ಜಿಟಿಡಿ ಬೆಂಬಲ ರಜನಿ ಅವರಿಗೆ ಪ್ಲಸ್ ಆಗುವ ಸಾಧ್ಯತೆಯಿದೆ.

ಒಂದೇ ದಿನ ಮೂವರು ನಾಮಪತ್ರ ಸಲ್ಲಿಕೆಗೆ ಸಜ್ಜು

ಕಾಂಗ್ರೆಸ್-ಜಾ.ದಳದಿಂದ ಅಭ್ಯರ್ಥಿಗಳನ್ನು ಪ್ರಕಟಿಸಿದ್ದರೂ ಇದುವರೆಗೂ ಯಾರು ನಾಮಪತ್ರ ಸಲ್ಲಿಸಿಲ್ಲ. ಸೋಮವಾರ ಗಾಯತ್ರಿಪುರಂನಲ್ಲಿರುವ ನಗರಪಾಲಿಕೆ ವಲಯ ಕಚೇರಿ-9ರಲ್ಲಿ ನಾಮಪತ್ರ ಸಲ್ಲಿಸಲು ತಯಾರಿ ಮಾಡಿಕೊಂಡಿದ್ದಾರೆ. ಯರಗನಹಳ್ಳಿಯಲ್ಲಿರುವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬೆರಳಣಿಕೆಯಷ್ಟು ಮಂದಿ ಕಾರ್ಯಕರ್ತರೊಡನೆ ತೆರಳಿ ನಾಮಪತ್ರ ಸಲ್ಲಿಸಿ ಅಖಾಡಕ್ಕೆ ಧುಮುಕಲು ಅಣಿಯಾಗಿದ್ದಾರೆ.

× Chat with us