ಮೈಸೂರು ಪಾಲಿಕೆ ಉಪ ಚುನಾವಣೆ| ಬಿಜೆಪಿ ಅಭ್ಯರ್ಥಿಯಾಗಿ ಶೋಭಾ ಕಣಕ್ಕೆ, ಇಂದು ನಾಮಪತ್ರ ಸಲ್ಲಿಕೆ

ಮೈಸೂರು: ಮೈಸೂರು ಮಹಾನಗರಪಾಲಿಕೆಯ 36ನೇ ವಾರ್ಡಿಗೆ ಸೆ.3 ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯಾಗಿ ಶೋಭಾ ರಮೇಶ್ ಅವರನ್ನು ಕಣಕ್ಕಿಳಿಸಲಿದೆ.

36 ನೇ ವಾರ್ಡಿನ ಅಧ್ಯಕ್ಷರಾಗಿ ಕಳೆದ 30 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ರಮೇಶ್ ಅವರ ಪತ್ನಿ ಶೋಭಾ ಅವರನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿದೆ. ಕಳೆದ ಬಾರಿ ಪರಾಭವಗೊಂಡಿದ್ದ ಗೀತಾ ಮುರಳೀಧರ್ ಸೇರಿದಂತೆ ಹಲವಾರು ಮಂದಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಈ ವಾರ್ಡಿನಲ್ಲಿ ಕಾಂಗ್ರೆಸ್- ಜಾ.ದಳದ ನಡುವೆ ನೇರ ಹಣಾಹಣಿ ನಡೆಯುತ್ತಿದ್ದರಿಂದ ಬಿಜೆಪಿ ಪ್ರಭಾವ ಇರಲಿಲ್ಲ. ಹೀಗಾಗಿ, ಈ ಬಾರಿ ಬಿಜೆಪಿ ನಾಯಕರು ತೀವ್ರ ಪೈಪೋಟಿ ನೀಡುವುದಲ್ಲದೆ, ವಾರ್ಡಿನಲ್ಲಿ ಗೆಲುವು ಸಾಧಿಸಲೇಬೇಕೆಂಬ ಕಾರಣಕ್ಕಾಗಿ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿತ್ತು.

ಶನಿವಾರ ಸಂಜೆ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದ ಆಕಾಂಕ್ಷಿಗಳ ಬಗ್ಗೆ ಚರ್ಚೆ ನಡೆಸಿದ ಬಿಜೆಪಿ ನಾಯಕರು ಮೂವರ ಹೆಸರನ್ನು ಅಂತಿಮಗೊಳಿಸಿದ್ದರು. ನಂತರ, ಭಾನುವಾರ ಬೆಳಿಗ್ಗೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ಸಾಧಕ- ಬಾಧಕಗಳ ಬಗ್ಗೆ ಸಮಾಲೋಚನೆ ನಡೆಸಿದ ಮೇಲೆ ಅಂತಿಮವಾಗಿ ಶೋಭಾ ಅವರನ್ನು ಆಯ್ಕೆ ಮಾಡಿ ‘ಬಿ’ ಫಾರಂ ನೀಡಲು ನಿರ್ಧರಿಸಲಾಯಿತು.

ವಾರ್ಡ್ ಅಧ್ಯಕ್ಷರ ಪತ್ನಿ

36ನೇ ವಾರ್ಡಿನ ಬಿಜೆಪಿ ಅಧ್ಯಕ್ಷ ರಮೇಶ್ ಅವರ ಪತ್ನಿ ಶೋಭಾ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದ್ದಾರೆ. ಮೂರು ದಶಕಗಳಿಂದ ಬಿಜೆಪಿಯಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುವ ರಮೇಶ್ ಅವರ ಪಕ್ಷ ನಿಷ್ಠೆ, ಸಂಘಟನೆಯನ್ನು ಗುರುತಿಸಿ ಟಿಕೆಟ್ ನೀಡಲಾಗಿದೆ.

ಇಂದು ನಾಮಪತ್ರ ಸಲ್ಲಿಕೆ

ಸೆ.3ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ ಕೊನೆಯ ದಿನವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ.ಎಸ್.ರಜನಿ ಅಣ್ಣಯ್ಯ, ಜಾ.ದಳ ಅಭ್ಯರ್ಥಿಯಾಗಿ ಎಸ್.ಲೀಲಾವತಿ, ಬಿಜೆಪಿ ಅಭ್ಯರ್ಥಿಯಾಗಿ ಶೋಭಾ ನಾಮಪತ್ರ ಸಲ್ಲಿಸಲಿದ್ದಾರೆ. ನಗರಪಾಲಿಕೆಯ ವಲಯ ಕಚೇರಿ ೯ರಲ್ಲಿ ಸೋಮವಾರ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ಗಂಟೆ ತನಕ ನಾಮಪತ್ರ ಸಲ್ಲಿಸಲಿದ್ದಾರೆ.

× Chat with us