ಮೈಸೂರು| ಹಸಿರ ಬೆಳಕಿನ ಹಬ್ಬದ ಸಂಭ್ರಮ

(ಸಾಂದರ್ಭಿಕ ಚಿತ್ರ)

ಮೈಸೂರು: ಕೊರೊನಾ ನಿಯಂತ್ರಣವಿದ್ದರೂ ಅವ್ಯಕ್ತ ಆತಂಕ ಹಾಗೂ ಹಸಿರು ಪಟಾಕಿ ಸಿಡಿಸುವ ಬೇಡಿಕೆ ನಡುವೆ ಮೈಸೂರು ಭಾಗದಲ್ಲಿ ಬೆಳಕಿನ ಹಬ್ಬ ದೀಪಾವಳಿಗೆ ಸಡಗರದ ವಾತಾವರಣ. ಆರ್ಥಿಕವಾಗಿ ಸಾಕಷ್ಟು ಹಿನ್ನಡೆ ಕಂಡರೂ ಇರುವುದರಲ್ಲಿಯೇ ಖುಷಿಯಿಂದಲೇ ಹಬ್ಬ ಆಚರಿಸಲು ಜನರು ಅಣಿ.

ಕೊರೊನಾ ಕರಿನೆರಳಿನ ನಡುವೆಯೂ ದೀಪಾವಳಿ ಆಚರಣೆಗೆ ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ಹಳೆ ಮೈಸೂರು ಭಾಗ ಸಜ್ಜಾಗಿದೆ. ಮಂಡ್ಯ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳಲ್ಲೂ ಬೆಳಕಿನ ಹಬ್ಬಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಮಂಡ್ಯ, ಮಡಿಕೇರಿ, ಚಾಮರಾಜನಗರ, ಕೊಳ್ಳೇಗಾಲ, ನಂಜನಗೂಡು, ಹುಣಸೂರು ಸಹಿತ ಪ್ರಮುಖ ನಗರಿ, ಪಟ್ಟಣ, ಹೋಬಳಿ ಕೇಂದ್ರಗಳಲ್ಲಿ ಪಟಾಕಿ ಜತೆಗೆ ಬಟ್ಟೆ, ಹಣ್ಣು, ಹೂವು ಹಾಗೂ ಬಾಳೆ ಕಂದು ಹಾಗೂ ಇತರೆ ಸಾಮಗ್ರಿಗಳ ಖರೀದಿ ಭರಾಟೆ ತಕ್ಕಮಟ್ಟಿಗೆ ಇತ್ತು. ವ್ಯಾಪಾರಿಗಳು ನಿರೀಕ್ಷಿತ ಮಟ್ಟದಲ್ಲಿ ಪಟಾಕಿ ವ್ಯಾಪಾರವಾಗದ ಬೇಸರ ಅನುಭವಿಸಿದ್ದು ಕಂಡು ಬಂದಿತು.

ಸರ್ವೋಚ್ಚ ನ್ಯಾಯಾಲಯ ಮತ್ತು ರಾಜ್ಯ ಸರ್ಕಾರ ಹಸಿರು ಪಟಾಕಿ ವಾರಾಟಕ್ಕೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಹಸಿರು ದೀಪಾವಳಿ ಆಚರಿಸಲಾಗುತ್ತಿದೆ. ಇನ್ನು ಯುವಕ/ಯುವತಿಯರಂತೂ ಪಟಾಕಿ ಖರೀದಿಸುವ ಗೋಜಿಗೇ ಹೋಗದೇ, ಹಣತೆಗಳ ಖರೀದಿಯಲ್ಲಿ ಮಗ್ನರಾಗಿದ್ದರು. ಬಗೆ-ಬಗೆ ವಿನ್ಯಾಸದ ಹಣತೆಗಳನ್ನು ಖರೀದಿಸಿ ಸಂತಸಪಟ್ಟರು.

೪೨ ಮಳಿಗೆಗಳಿಗೆ ಮಾತ್ರವೇ ಅನುಮತಿ

ಮೈಸೂರಿನಲ್ಲಿದ್ದ ಒಟ್ಟು ೬೦ಕ್ಕೂ ಹೆಚ್ಚು ಮಳಿಗೆಗಳ ಪೈಕಿ ಶನಿವಾರ ಪೊಲೀಸ್ ಇಲಾಖೆ, ಮಹಾನಗರಪಾಲಿಕೆ ಹಾಗೂ ಪರಿಸರ ವಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಪರಿಶೀಲಿಸಿ ೪೨ ಮಳಿಗೆಗಳಿಗೆ ಮಾತ್ರವೇ ಅನುಮತಿ ನೀಡಿದರು. ಸದ್ಯ ಈವರೆಗೆ ಶೇ.೨೦ರಷ್ಟು ಮಳಿಗೆಗಳು ಮಾತ್ರವೇ ಮೈಸೂರಿನಲ್ಲಿ ಮಾರಾಟವಾಗಿದ್ದು, ಪಟಾಕಿ ವರ್ತಕರು ಹೂಡಿರುವ ಬಂಡವಾಳವಾದರೂ ವಾಪಸ್ಸು ಬಂದರೆ ಸಾಕು ಎನ್ನುವ ಸ್ಥಿತಿಯಲ್ಲಿದ್ದಾರೆ.

ಭಾನುವಾರವೂ ತಪಾಸಣೆ ನಡೆಸಿದ ಪೊಲೀಸರು ನಗರದಲ್ಲಿ ಹಸಿರು ಪಟಾಕಿಯ ಜೊತೆಗಿಟ್ಟು ಮಾರಾಟ ಮಾಡಲಾಗುತ್ತಿದ್ದ ಸಾಮಾನ್ಯ ಪಟಾಕಿಗಳನ್ನು ತೆರವುಗೊಳಿಸಿ, ಹಸಿರು ಪಟಾಕಿಗೆ ಅವಕಾಶ ಕಲ್ಪಿಸಿದರು. ಆದರೂ ಕೆಲವೆಡೆ ಹಸಿರು ಪಟಾಕಿ ಸೋಗಿನಲ್ಲಿ ಸಾಮಾನ್ಯ ಪಟಾಕಿಯೂ ಮಾರಾಟ ಮಾಡುತ್ತಿದ್ದದ್ದು ಕಂಡುಬಂದಿತು.

ಹೂವಿನ ಧಾರಣೆ ಸ್ಥಿರ: ʻದೀಪಾವಳಿ ಹಬ್ಬಕ್ಕಾಗಿಯೇ ತಮಿಳುನಾಡು, ಶ್ರೀರಂಗಪಟ್ಟಣ, ತಿ.ನರಸೀಪುರ, ನಂಜನಗೂಡು, ಕೊಳ್ಳೇಗಾಲ ಭಾಗದಿಂದ ಮೈಸೂರಿನ ಮಾರುಕಟ್ಟೆಗೆ ಹೂವು ಹೆಚ್ಚಿನ ಪ್ರಮಾಣದಲ್ಲಿ ಬಂದಿದೆ. ಇದರಿಂದ ಖರೀದಿಯಲ್ಲಿ ಬಿರುಸಿದ್ದರೂ, ಧಾರಣೆ ಸ್ಥಿರವಾಗಿಯೇ ಇತ್ತು ಎಂದು ಹೂವಿನ ವ್ಯಾಪಾರಿ ಎನ್.ಮಂಜುನಾಥ್ ತಿಳಿಸಿದರು.

ಕೆ.ಆರ್.ಆಸ್ಪತ್ರೆಯಲ್ಲಿ ೨೦ ಮುಂಗಡ ಹಾಸಿಗೆಗಳು ರೆಡಿ

ʻಸೋಮವಾರ (ನ.೧೬ರಂದು) ದೀಪಾವಳಿ ಆಚರಣೆ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸುವುದರಿಂದ ಆಗಬಹುದಾದ ಅನಾಹುತಗಳ ಬಗ್ಗೆ ಎಚ್ಚೆತ್ತು, ಮುನ್ನೆಚ್ಚರಿಕಾ ಕ್ರಮವಾಗಿ ಕೆ.ಆರ್.ಆಸ್ಪತ್ರೆಯಲ್ಲಿ ೨೦ ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಯಾವುದೇ ಸಂದರ್ಭದಲ್ಲೂ ಪಟಾಕಿಯಿಂದ ಅಪಘಾತ ಸಂಭವಿಸಿದಲ್ಲಿ ಅವರ ರಕ್ಷಣೆಗೆ ವೈದ್ಯಕೀಯ ಸಿಬ್ಬಂದಿ ಸಿದ್ಧರಿದ್ದಾರೆ.ʼ
-ಡಾ.ಸಿ.ಪಿ.ನಂಜರಾಜು, ಎಂಎಂಸಿ ಡೀನ್.

ʻಜನರು ಪರಿಸರದ ಬಗ್ಗೆ ಕಾಳಜಿ ಬೆಳೆಸಿಕೊಂಡಿದ್ದಾರೆ. ಈ ಬಾರಿ ಹಸಿರು ದೀಪಾವಳಿಯೇ ಉತ್ತಮ ಪರಿಸರ ನಿರ್ಮಾಣಕ್ಕೆ ದೊಡ್ಡ ಕಾಣಿಕೆ. ಇದನ್ನೇ ಮುಂದುವರಿಸಿದರೆ, ಮುಂದೆ ಪಟಾಕಿ ಇಲ್ಲದೆಯೂ ಹಬ್ಬ ಆಚರಿಸಬಹುದು.ʼ
-ಎ.ಎನ್.ಪ್ರಕಾಶ್‌ಗೌಡ, ಡಿಸಿಪಿ

× Chat with us