ಮುಂಬೈ: ಬೆಂಕಿ ಅವಘಡದಲ್ಲಿ ವ್ಯಕ್ತಿ ಸಾವು

ಮುಂಬೈ: ದೇಶದ ಪ್ರಮುಖ ವಾಣಿಜ್ಯನಗರ ಮುಂಬೈನಲ್ಲಿ ಮತ್ತೊಂದು ಭೀಕರ ಬೆಂಕಿ ಅವಘಡ ಸಂಭವಿಸಿದ್ದು, ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಹಲವರು ಬೆಂಕಿಯಲ್ಲಿ ಸಿಲುಕಿದ್ದಾರೆ ಎಂದು ಹೇಳಲಾಗಿದೆ.

ಸೆಂಟ್ರಲ್ ಮುಂಬೈನ ಮಾಧವ್ ಪಾಲವ್ ಮಾರ್ಗದಲ್ಲಿರುವ ಅವಿಘ್ನ ಪಾರ್ಕ್ ಕಟ್ಟಡದಲ್ಲಿ ಶುಕ್ರವಾರ ಮಧ್ಯಾಹ್ನ ಬೆಂಕಿ ಹೊತ್ತಿಕೊಂಡಿತು. ಸುಮಾರು ೬೧ ಅಂತಸ್ತಿನ ಈ ವಸತಿ ಕಟ್ಟಡದ ೧೯ನೇ ಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ವಿಚಾರ ತಿಳಿಯುತ್ತಲೇ ೮ಕ್ಕೂ ಹೆಚ್ಚು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ.

ಕಟ್ಟಡದಲ್ಲಿದ್ದ ಸುಮಾರು ೩೦ ವರ್ಷದ ಸ್ಥಳೀಯ ನಿವಾಸಿ ಬೆಂಕಿಯಿಂದ ತಪ್ಪಿಸಿಕೊಳ್ಳಲು ಬಾಲ್ಕನಿಯಿಂದ ಕೆಳಗೆ ಇಳಿಯಲು ಯತ್ನಿಸಿದ್ದಾರೆ. ಈ ವೇಳೆ ಆಯತಪ್ಪಿ ಕೆಳಗೆ ಬಿದ್ದಿದ್ದರಿಂದ ಸ್ಥಳದಲ್ಲೇ ಅವರು ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ವಸತಿ ಕಟ್ಟಡವಾದ್ದರಿಂದ ಸಾಕಷ್ಟು ಕುಟುಂಬಗಳು ಇಲ್ಲಿ ವಾಸವಾಗಿದ್ದವು. ಹೀಗಾಗಿ ಕಟ್ಟಡದಲ್ಲಿ ಹಲವರು ಸಿಲುಕಿರುವ ಶಂಕೆ ಇದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ. ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

× Chat with us