ಪಾಲಿಕೆಗೆ ಸಾತಗಳ್ಳಿಯಲ್ಲಿರುವ 19.15 ಎಕರೆ ಪ್ರದೇಶ ಹಸ್ತಾಂತರಿಸಿದ ಮುಡಾ

ಮೈಸೂರು: ನಗರದ ಹೊರ ವಲಯದ ರಿಂಗ್ ರಸ್ತೆಯ ಅಕ್ಕಪಕ್ಕದಲ್ಲಿ ಸುರಿದಿರುವ ಕಟ್ಟಡ-ಘನತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಹಂಚ್ಯ-ಸಾತಗಳ್ಳಿಯಲ್ಲಿ ಮುಡಾಕ್ಕೆ ಸೇರಿದ 19.15 ಎಕರೆ ಪ್ರದೇಶವನ್ನು ಮೈಸೂರು ನಗರಪಾಲಿಕೆಗೆ ಹಸ್ತಾಂತರಿಸಲಾಯಿತು.

ಮುಡಾ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಘನ ತ್ಯಾಜ್ಯ ವಿಲೇವಾರಿ ಸಂಬಂಧ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಸಂದರ್ಭದಲ್ಲಿ ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಆಯುಕ್ತ ಡಾ.ಡಿ.ಬಿ.ನಟೇಶ್ ಅವರು ನಗರಪಾಲಿಕೆ ಆಯುಕ್ತ ಗುರುದತ್ ಹೆಗಡೆ ಅವರಿಗೆ ಭೂಮಿ ಹಸ್ತಾಂತರದ ಆದೇಶ ಪ್ರತಿಯನ್ನು ನೀಡಿದರು.

ಸಿವೇಜ್ ಫಾರಂಗೆ ಹೊಂದಿಕೊಂಡಂತೆ ಇರುವ ಲಾರಿ ಟರ್ಮಿನಲ್ ಸಮೀಪದ ಜಾಗದಲ್ಲಿ ಮುಡಾಕ್ಕೆ ಸೇರಿದ್ದ 8 ಎಕರೆ ಪ್ರದೇಶದಲ್ಲಿ ಕಟ್ಟಡ ತ್ಯಾಜ್ಯ ವಿಲೇವಾರಿ ಮತ್ತು ಮರು ಬಳಕೆ ಘಟಕ ತೆರೆಯಲು ಜಾಗ ಗುರುತಿಸಲಾಗಿತ್ತು. ಆದರೆ, ಈ ಜಮೀನು ತಮಗೆ ಸೇರಿದ್ದೆಂದು ಮಾಲೀಕರೊಬ್ಬರು ನ್ಯಾಯಾಲಯದಲ್ಲಿ ದಾವೆ ಹೂಡಿ ವಿವಾದದಲ್ಲಿದ್ದ ಕಾರಣ ಕೈಬಿಡಲಾಗಿತ್ತು. ಈಗ ಹಂಚ್ಯ-ಸಾತಗಳ್ಳಿ ಸರ್ವೆ ನಂಬರ್ 88, 105, 106 ಮತ್ತು 107ರಲ್ಲಿ ಇರುವ 19.15 ಎಕರೆ ಜಮೀನು ಮುಡಾ ಸ್ವಾಧೀನದಲ್ಲಿದ್ದರಿಂದ ನಗರಪಾಲಿಕೆಗೆ ನೀಡಲಾಯಿತು. ಪಾಲಿಕೆಗೆ ಕೊಟ್ಟಿರುವ ಜಮೀನು ಸ್ವಾಧೀನಪಡಿಸಿಕೊಂಡಿರುವ ಸ್ವತ್ತಾಗಿದ್ದು, ತಗ್ಗು ಪ್ರದೇಶದಿಂದ ಕೂಡಿರುವ ಕಾರಣ ಸಮತಟ್ಟುಗೊಳಿಸುವ ನಿಟ್ಟಿನಲ್ಲಿ ತಾತ್ಕಾಲಿಕವಾಗಿ ಘನತ್ಯಾಜ್ಯ ಮತ್ತು ಕಟ್ಟಡ ತ್ಯಾಜ್ಯಗಳನ್ನುಮಾತ್ರ ವಿಲೇವಾರಿ ಮಾಡಲು ಹಲವು ಷರತ್ತುಗಳನ್ನು ವಿಧಿಸಿ ಕೊಡಲಾಗಿದೆ. ಕಟ್ಟಡ ತ್ಯಾಜ್ಯ, ಘನತ್ಯಾಜ್ಯಗಳನ್ನು ಮಾತ್ರ ವಿಲೇವಾರಿ ಮಾಡತಕ್ಕದ್ದು, ಯಾವುದೇ ಕಾರಣಕ್ಕೂ ಒಣ ಕಸ, ಪ್ಲಾಸ್ಟಿಕ್‌ಗಳನ್ನು ಸುರಿಯುವುದು ಮತ್ತು ವಿಲೇವಾರಿ ಮಾಡುವಂತಿಲ್ಲ ಎಂದು ಹೇಳಲಾಗಿದೆ ಎಂದು ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್ ಹೇಳಿದರು.

ಸಂಸದ ಪ್ರತಾಪ್‌ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್‌ಸೇಠ್, ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಸದಸ್ಯರಾದ ಎಸ್‌ಬಿಎಂ ಮಂಜು, ಎಸ್.ಲಕ್ಷ್ಮೀದೇವಿ, ಎಂ.ಎನ್.ನವೀನ್‌ಕುಮಾರ್,ಲಿಂಗಯ್ಯ, ಕೆ.ಮಾದೇಶ್, ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಮುಡಾ ಕಾರ್ಯದರ್ಶಿ ಎಂ.ಕೆ.ಸವಿತ, ಅಧೀಕ್ಷಕ ಅಭಿಯಂತರ ಶಂಕರ್, ನಗರಪಾಲಿಕೆ ಆರೋಗ್ಯಾಧಿಕಾರಿಗಳಾದ ಡಾ.ನಾಗರಾಜು, ಜಯಂತ್ ಮೊದಲಾದವರು ಇದ್ದರು.

× Chat with us