ಮುಡಾ ಆಯುಕ್ತರ ಕಾರುಗಳು ಜಪ್ತಿ!

ಮೈಸೂರು: ಭೂ ಸ್ವಾಧೀನ ಪಡಿಸಿಕೊಂಡು ಹೆಚ್ಚುವರಿ ಪರಿಹಾರ ನೀಡದಿರುವ ಕಾರಣ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಆಯುಕ್ತರ ಕಾರು ಸೇರಿದಂತೆ ಎರಡು ಕಾರುಗಳನ್ನು ಜಪ್ತಿ ಮಾಡಲಾಗಿದೆ.

ಮೈಸೂರಿನ ನ್ಯಾಯಾಲಯದ ಆದೇಶದ ಮೇರೆಗೆ ಗುರುವಾರ ಮುಡಾ ಕಚೇರಿ ಆವರಣಕ್ಕೆ ಬಂದ ಆಮೀನರು, ಆಯುಕ್ತರು ಕಾರು ಸೇರಿದಂತೆ ಎರಡು ಕಾರುಗಳನ್ನು ಜಪ್ತಿ ಮಾಡಿ, ಕೋರ್ಟ್ ನೋಟಿಸ್ ಅಂಟಿಸಿದ್ದಾರೆ.

ಮೈಸೂರು ತಾಲ್ಲೂಕಿನ ಯಾಂದಳ್ಳಿ ಗ್ರಾಮದಲ್ಲಿನ ಸರ್ವೆ ನಂ. 109/1ರಲ್ಲಿ ಚಿನ್ನ ಸ್ವಾಮಿ ಎಂಬವರಿಗೆ ಸೇರಿದ 1 ಎಕರೆ 26 ಗುಂಟೆ ಜಮೀನನ್ನು 1997 ರಲ್ಲಿ ಮುಡಾ ಬಡಾವಣೆ ನಿರ್ಮಾಣ ಸಂಬಂಧ ಸ್ವಾಧೀನ ಪಡಿಸಿಕೊಂಡಿತ್ತು. ಇದಕ್ಕೆ 8.96 ಲಕ್ಷ ರೂ. ಪರಿಹಾರ ನೀಡಲಾಗಿತ್ತು. ಹೆಚ್ಚುವರಿ ಪರಿಹಾರಕ್ಕೆ ಜಮೀನು ಮಾಲೀಕರು 2010ರಲ್ಲಿ ಕೋರ್ಟ್ ಮೊರೆ ಹೋದರು.

ಆಗ ನ್ಯಾಯಾಲಯ 89.79 ಲಕ್ಷ ರೂ. ಪರಿಹಾರ ನೀಡಲು ಆದೇಶ ನೀಡಿತ್ತು. ಈ ಮೊತ್ತದಲ್ಲಿ ಇನ್ನೂ ಬಾಕಿಯಾಗಿ 1.41 ಲಕ್ಷ ರೂ. ನೀಡಬೇಕಾಗಿರುವಾಗಲೇ ಜಮೀನು ಮಾಲೀಕರು, ತಮಗೆ ಭೂ ಸ್ವಾಧೀನ ಪಡಿಸಿಕೊಂಡ ದಿನದಿಂದಲ್ಲ, ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ದಿನದಿಂದಲ್ಲೇ ಪರಿಹಾರ ನೀಡಬೇಕಾಗಿದ್ದು, ಒಟ್ಟಾರೆ 35 ಲಕ್ಷ ರೂ. ಪರಿಹಾರ ಬರಬೇಕೆಂದು ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ತಿಳಿಸಿದರು.

ಈ ಪರಿಹಾರ ಹಣ ಬಾರದೇ ಇರುವ ಬಗ್ಗೆ ಕೋರ್ಟ್ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ನ್ಯಾಯಾಧೀಶರು, ಜಪ್ತಿಗೆ ಆದೇಶ ನೀಡಿದ್ದರು.

ʻಭೂ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ದಿನದಿಂದ ಪರಿಹಾರ ನೀಡಬೇಕೆಂಬುದು ಶಾಸನಬದ್ಧವಲ್ಲ. ಜಮೀನು ಮಾಲೀಕರಿಗೆ ನ್ಯಾಯಬದ್ಧವಾಗಿ ಪರಿಹಾರ ನೀಡಲಾಗಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಸಲಾಗುವುದುʼ.

-ಡಾ.ಸಿ.ಬಿ.ನಟೇಶ್, ಆಯುಕ್ತರು, ಮುಡಾ

× Chat with us