ವಿವೇಕಾನಂದ ಸ್ಮಾರಕ ನಿರ್ಮಾಣಕ್ಕೆ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಬೆಂಬಲ

ಮೈಸೂರು: ವಿವೇಕ ಸ್ಮಾರಕ ನಿರ್ಮಿಸುವ ವಿಚಾರದಲ್ಲಿ ನ್ಯಾಯಾಲಯದ ತೀರ್ಪು ರಾಮಕೃಷ್ಣ ಆಶ್ರಮದ ಪರವಾಗಿ ಬಂದಿರುವುದರಿಂದ ಎಲ್ಲರೂ ಆದೇಶವನ್ನು ಪಾಲಿಸಬೇಕಾದುದು ಕರ್ತವ್ಯ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಸಲಹೆ ನೀಡಿದ್ದಾರೆ.

ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಅವರು, ಮೈಸೂರಿಗೆ ಸ್ವಾಮಿ ವಿವೇಕಾನಂದರು ಭೇಟಿ ನೀಡಿದ ಸ್ಮರಣಾರ್ಥವಾಗಿ ಎನ್‌ಟಿಎಂ ಮತ್ತು ನಿರಂಜನ ಮಠದ ಸ್ಥಳದಲ್ಲಿ ಯುವಜನತೆಗಾಗಿ ವಿವೇಕ ಸ್ಮಾರಕ ಮತ್ತು ಯುವ ಸಾಂಸ್ಕೃತಿಕ ಕೇಂದ್ರವನ್ನು ನಿರ್ಮಿಸಲು ರಾಮಕೃಷ್ಣ ಆಶ್ರಮವು ಕೈಗೊಂಡಿರುವ ನಿರ್ಧಾರವನ್ನು ಮೈಸೂರಿನ ಜನತೆಯು ಗೌರವದಿಂದ ಬೆಂಬಲಿಸಬೇಕು ಎಂದೂ ಹೇಳಿದ್ದಾರೆ.

ʻನಾನು ಕಂದಾಯ ಸಚಿವನಾಗಿದ್ದಾಗ ಅಂದಿನ ಸಿಎಂ ಸಿದ್ದರಾಮಯ್ಯ ಅವರು ರಾಮಕೃಷ್ಣ ಮಠದ ಪರವಾಗಿರುವವರನ್ನು ಹಾಗೂ ಎನ್‌ಟಿಎಂ ಶಾಲೆಯ ಪರವಾಗಿರುವ ಕನ್ನಡಪರ ಹೋರಾಟಗಾರರನ್ನು ಕರೆದು ಸಭೆ ಮಾಡಲಾಗಿತ್ತು. ಆದರೆ, ಈ ವಿಷಯವು ಹೈಕೋರ್ಟ್‌ನಲ್ಲಿ ಇದ್ದುದರಿಂದ ನ್ಯಾಯಾಲಯದ ತೀರ್ಮಾನವನ್ನು ನಾವೆಲ್ಲಾ ಪಾಲಿಸೋಣ ಎಂಬ ತೀರ್ಮಾನಕ್ಕೆ ಬರಲಾಯಿತು. ಇಂದು ನ್ಯಾಯಾಲಯದ ತೀರ್ಪು ರಾಮಕೃಷ್ಣ ಆಶ್ರಮದ ಪರವಾಗಿ ಬಂದಿರುವುದರಿಂದ ಎಲ್ಲರೂ ಆದೇಶವನ್ನು ಪಾಲಿಸಬೇಕಾದುದು ಕರ್ತವ್ಯ ಎಂದಿದ್ದಾರೆ.

ಹಲವು ವರ್ಷಗಳಿಂದ ಈ ವಿಚಾರವು ನ್ಯಾಯಾಲಯದಲ್ಲಿ ಸಾಕಷ್ಟು ಪರಿಶೀಲನೆಗೊಂಡಿದ್ದು, ಜೂ.8, 2020ರಂದು ಹೈಕೋರ್ಟ್‌ ವಿವೇಕ ಸ್ಮಾರಕ ಯೋಜನೆಯ ಎಲ್ಲ ಆಯಾಮಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ರಾಮಕೃಷ್ಣ ಆಶ್ರಮದ ಯೋಜನೆಯನ್ನು ಮಾನ್ಯವಾಡಿ ತೀರ್ಪು ನೀಡಿರುವುದು ಸ್ವಾಗತಾರ್ಹ. ಈ ಸ್ಮಾರಕದ ಧ್ಯೇಯ ಮತ್ತು ಕಾರ್ಯ ಯೋಜನೆಗಳಿಂದ ಸಮಾಜದ ಎಲ್ಲ ವರ್ಗದ ಯುವಕ ಯುವತಿಯರು ಭವಿಷ್ಯದಲ್ಲಿ ಪ್ರಯೋಜನ ಪಡೆಯಲಿದ್ದಾರೆ. ಇದನ್ನು ನಾವೆಲ್ಲರೂ ಮನಗಂಡು ಬೆಂಬಲಿಸಬೇಕಾಗಿದೆ. ಈ ಯೋಜನೆಯು ಕನ್ನಡ ಯುವಜನತೆಗೆ ಮತ್ತು ಕನ್ನಡ ಸಂಸ್ಕೃತಿಯ ಅಭಿವೃದ್ಧಿಗೆ ಪೂರಕವಾಗಿರುತ್ತದೆ. ಮೈಸೂರಿನ ಸಮಸ್ತ ಜನರೂ ವಿವೇಕ ಸ್ಮಾರಕ ನಿರ್ಮಾಣ ಯೋಜನೆಗೆ ಮತ್ತು ರಾಮಕೃಷ್ಣ ಆಶ್ರಮದ ಈ ಯುವಜನ ಸೇವಾ ಕಾರ್ಯಕ್ಕೆ ಸ್ಪಂದಿಸಿ ಸಹಕರಿಸಬೇಕಾಗಿದೆ. ಅಲ್ಲದೆ, ಮೈಸೂರು ನಗರವೇ ಈ ಮೂಲಕ ಸ್ವಾಮಿ ವಿವೇಕಾನಂದರ ಮಹಾನ್ ವ್ಯಕ್ತಿತ್ವಕ್ಕೆ ಗೌರವಾರ್ಪಣೆಯನ್ನು ಮಾಡುವ ಸುಸಂದರ್ಭ ಇದಾಗಿದೆ ಎಂದು ತಿಳಿಸಿದ್ದಾರೆ.

ಆದ್ದರಿಂದ ಸಮಾಜಮುಖಿ ಯೋಜನೆಯ ಪರಮಪ್ರಯೋಜನಗಳನ್ನು ಯುವಜನತೆ ವರ್ತಮಾನದಲ್ಲೂ ಮತ್ತು ಭವಿಷ್ಯದಲ್ಲೂ ಪಡೆಯುವಂತಾಗಲು, ಭಿನ್ನ-ಭಿನ್ನ ದೃಷ್ಟಿಕೋನಗಳನ್ನು ಮರೆತು ಮೈಸೂರಿಗರೆಲ್ಲರೂ ಸಾಮರಸ್ಯರಿಂದ ಒಂದಾಗಿ ಕೈಜೋಡಿಸೋಣ ಎಂದು ಅವರು ಪ್ರಕಟಣೆಯ ಮೂಲಕ ಕರೆ ನೀಡಿದ್ದಾರೆ.

× Chat with us