ಲಸಿಕೆ ಹಗರಣ: ಸಂಸದ ತೇಜಸ್ವಿ ಸೂರ್ಯ ಮಾವನ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಉಚಿತವಾಗಿ ನೀಡಬೇಕಿದ್ದ ಕೋವಿಡ್‌ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ಜನರಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಅವರ ಮಾವನ ವಿರುದ್ಧ ಸಾಮಾಜಿಕ ಕಾರ್ಯಕರ್ತರೊಬ್ಬರು ದೂರು ದಾಖಲಿಸಿದ್ದಾರೆ.

ಲಸಿಕೆ ಪಡೆಯುವ ಬಗ್ಗೆ ವಿಚಾರಿಸಲು ಎ.ವಿ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಕರೆ ಮಾಡಿ ಸಾಮಾಜಿಕ ಕಾರ್ಯಕರ್ತ ವಿಚಾರಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಆಡಿಯೊ ತುಣುಕನ್ನು ದೂರಿನೊಂದಿಗೆ ನೀಡಿದ್ದಾರೆ. ಆಡಿಯೊನಲ್ಲಿ ರವಿ ಸುಬ್ರಹ್ಮಣ್ಯ ಹೆಸರು ಪ್ರಸ್ತಾಪವಾಗಿದೆ.

ಆಡಿಯೊ ವಿವರ: ಕರೆ ಮಾಡಿದ ವೆಂಕಟೇಶ್‌, ʻನನಗೆ ಮತ್ತು ನನ್ನ ಮಗನಿಗೆ ಲಸಿಕೆ ಬೇಕು ಎಂದು ಆಸ್ಪತ್ರೆ ಸಿಬ್ಬಂದಿ ಕೇಳಿದ್ದಾರೆ. ನೋಂದಣಿ ಮಾಡಿಕೊಳ್ಳಿ. ಸಂದೇಶ ಬಂದರೆ ಬನ್ನಿ. ಶಾಸಕ ರವಿ ಸುಬ್ರಹ್ಮಣ್ಯ ಕಚೇರಿ ಅಥವಾ ವಾಸವಿ ಆಸ್ಪತ್ರೆಯಿಂದ ನೀಡುವ ಅನುಮತಿಯೊಂದಿಗೆ ಬನ್ನಿ. ಲಸಿಕೆಗೆ 900 ರೂ. ಆಗುತ್ತದೆ. ಆ ದುಡ್ಡು ರವಿ ಸುಬ್ರಹ್ಮಣ್ಯ ಕಚೇರಿಗೆ ಹೋಗುತ್ತದೆ. ನಮ್ಮಲ್ಲಿ ಲಸಿಕೆ ಇಲ್ಲ. ಅವರ ಕಡೆಯವರೇ ಆಸ್ಪತ್ರೆಗೆ ಬಂದು ಲಸಿಕೆ ಹಾಕಿ ಹೋಗುತ್ತಾರೆ. ನಮ್ಮ ಆಸ್ಪತ್ರೆ ಸಿಬ್ಬಂದಿ ಸಹ ಹಣ ಕೊಟ್ಟು ಲಸಿಕೆ ಹಾಕಿಸಿಕೊಂಡಿದ್ದಾರೆʼ ಎಂದು ಆಡಿಯೊದಲ್ಲಿದೆ.

ʻಸರ್ಕಾರದ ಆಸ್ಪತ್ರೆಗಳಲ್ಲಿ ಕೋವಿಡ್‌ ಲಸಿಕೆ ಕೊರತೆ ಇದೆ. ನಿಮಗೆ ಹೇಗೆ ಲಸಿಕೆ ಸಿಕ್ಕಿತು. ಬಿಬಿಎಂಪಿಯಿಂದ ಉಚಿತವಾಗಿ ಲಸಿಕೆ ಕೊಡುತ್ತಿದ್ದಾರಲ್ಲ. ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚು ಹಣ ಏಕೆ ಪಡೆಯುತ್ತಿದ್ದೀರಾ? ನಾವು ಬಡವರು, ನಿಗದಿತ ದರ ಪಡೆಯಿರಿʼ ಎಂದು ವೆಂಕಟೇಶ್‌ ಕೋರಿದ್ದಾರೆ.

ವೆಂಕಟೇಶ್‌ ಆಡಿಯೊ ಒದಗಿಸಿ ನಗರ ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ಅವರಿಗೆ ದೂರು ನೀಡಿದ್ದಾರೆ.

ʻಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗೆ 900ರಿಂದ 1250 ರೂ.ವರೆಗೆ ದರ ನಿಗದಿ ಮಾಡಲಾಗಿದ್ದು, ಅಲ್ಲಿಗೆ ಹೋಗಿ ಲಸಿಕೆ ಹಾಕಿಸಿಕೊಳ್ಳುವಂತೆ ಸಚಿವರು, ಸಂಸದರು, ಶಾಸಕರು ಪ್ರಚಾರ ಮಾಡುತ್ತಿದ್ದಾರೆ. ಹೀಗಾದರೆ, ಬಡವರ ಪರಿಸ್ಥಿತಿ ಏನು?ʼ

-ಸಿದ್ದರಾಮಯ್ಯ, ಮಾಜಿ ಸಿಎಂ

× Chat with us