ಆಕ್ಸಿಜನ್‌ ವಿಷಯದಲ್ಲಿ ವಕಾಲತ್ತು ವಹಿಸಿದ್ದ ಪ್ರತಾಪ್‌ ಸಿಂಹ ಡಿಸಿ ವಿರುದ್ಧ ತಿರುಗಿಬಿದ್ದಿದ್ದೇಕೆ?

ಮೈಸೂರು: ಜಿಲ್ಲೆಯ ಗ್ರಾಮಾಂತರ ಭಾಗಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟಲು ಜಿಲ್ಲಾಧಿಕಾರಿಗಳು ಪ್ರತಿದಿನ ಕಚೇರಿಯಲ್ಲಿ ಕುಳಿತು ವಿಡಿಯೋ ಕಾನ್ಫರೆನ್ಸ್ ಮಾಡಿದರೆ ಸಾಲದು. ಜಿಲ್ಲಾ ಆರೋಗ್ಯಾಧಿಕಾರಿ, ಜಿಪಂ ಸಿಇಒ ಮತ್ತಿತರ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಬೇಕು ಎಂದು ಸಂಸದ ಪ್ರತಾಪ್ ಸಿಂಹ ತರಾಟೆಗೆ ತೆಗೆದುಕೊಂಡರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರಪಾಲಿಕೆ ವ್ಯಾಪ್ತಿಯಲ್ಲಿ ಕೊರೊನಾ ನಿಯಂತ್ರಣ ಅತ್ಯುತ್ತಮವಾಗಿ ನಡೆಯುತ್ತಿದೆ. ಆದರೆ, ಗ್ರಾಮಾಂತರ ಭಾಗದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ತಾಲ್ಲೂಕು ಆಸ್ಪತ್ರೆಗಳು, ಕೋವಿಡ್ ಕೇರ್ ಸೆಂಟರ್‌ಗಳಲ್ಲಿರುವ ರೋಗಿಗಳಿಗೆ ಸರಿಯಾದ ಸೌಕರ್ಯಗಳು ಸಿಗದಿರುವ ಕಾರಣ ಆ ಭಾಗಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಲು ಜಿಲ್ಲಾಡಳಿತ ಸ್ಥಳೀಯ ಅಧಿಕಾರಿಗಳ ಬಳಿ ಅಂಕಿ ಅಂಶ ಪಡೆದರೆ ಸಾಲದು. ಸ್ಥಳಕ್ಕೆ ಭೇಟಿ ನೀಡಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತಿವೆ. ಹೀಗೆ ಉನ್ನತ ಸ್ತರದ ಅಧಿಕಾರಿಗಳು ಸಹ ಕೆಲಸ ಮಾಡಬೇಕು. ಗ್ರಾಮಾಂತರ ಭಾಗಗಳ ತಾಲ್ಲೂಕು ಆಸ್ಪತ್ರೆಗಳು, ಕೋವಿಡ್ ಕೇರ್ ಸೆಂಟರ್‌ಗಳಲ್ಲಿರುವ ಅವ್ಯವಸ್ಥೆಯನ್ನು ನೋಡಿ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ ಪರಿಸ್ಥಿತಿ ನಿಯಂತ್ರಣಕ್ಕೆ ಬರುವುದಿಲ್ಲ ಎಂದು ಹೇಳಿದರು.

ನನಗೆ ತಿಳಿದಿರುವ ಪ್ರಕಾರ ಮೈಸೂರಿನಲ್ಲಿ ೨೦ಕ್ಕೂ ಹೆಚ್ಚು ಬ್ಲ್ಯಾಕ್ ಫಂಗಸ್ ಪ್ರಕರಣಗಳಿವೆ. ಇದಕ್ಕೆ ಚಿಕಿತ್ಸೆ ನೀಡಲು ಹೆಚ್ಚು ವಯಲ್‌ಗಳು ಬೇಕು. ಆದ್ದರಿಂದ ಸ್ವಲ್ಪ ತೊಂದರೆಯಾಗುತ್ತಿದೆ. ಔಷಧಿ ಕೊರತೆ ನೀಗಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

× Chat with us