ಕೆ-ಸೆಟ್‌ನಲ್ಲಿ ಅಕ್ರಮದ ವಾಸನೆ: ಮೈಸೂರು ವಿವಿ ಕುಲಪತಿಗೆ ಸಂಸದರ ಪತ್ರ

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ನಡೆಸಿದ 2021ನೇ ಸಾಲಿನ ಕೆ-ಸೆಟ್ ಪರೀಕ್ಷೆಯಲ್ಲಿ ಅಕ್ರಮಗಳನ್ನು ಎಸಗಿರುವುದು ಸಾಕ್ಷಿ ಸಮೇತ ನನ್ನ ಗಮನಕ್ಕೆ ಬಂದಿದೆ ಎಂದು ಸಂಸದ ಪ್ರತಾಪ್ ಸಿಂಹ ಅವರು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.

ವಿಶ್ವವಿದ್ಯಾನಿಲಯ ಬಿಡುಗಡೆ ಮಾಡಿರುವ ಕೆ-ಸೆಟ್ ಪರೀಕ್ಷೆಯ ಮಾದರಿ ಉತ್ತರ ಪತ್ರಿಕೆಗಳನ್ನು ಗಮನಿಸಿದಾಗ ಮೇಲ್ನೋಟಕ್ಕೆ ಪ್ರಶ್ನೆ ಪತ್ರಿಕೆಯಲ್ಲಿ ನೀಡಲಾಗಿರುವ ಉತ್ತರಗಳ ಆ್ಂಕೆುಯಲ್ಲೇ ಗಂಭೀರ ಲೋಪವಿರುವುದು ಎದ್ದು ಕಾಣುತ್ತಿದೆ ಎಂದು ವಿವಿ ಕುಲಪತಿಗೆ ಸಂಸದ ಪ್ರತಾಪ್‌ಸಿಂಹ ಬರೆದಿರುವ ಪತ್ರದಲ್ಲಿ ಆರೋಪಿಸಿದ್ದಾರೆ.

ಭವಿಷ್ಯದ ಪದವೀಧರರನ್ನು ತಯಾರು ಮಾಡುವಂತಹ ಉಪನ್ಯಾಸಕರು ಮತ್ತು ಪ್ರಾಧ್ಯಾಪಕರ ಅರ್ಹತೆಯನ್ನು ಅಳೆಯುವ ಕೆ-ಸೆಟ್‌ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ಮೈಸೂರು ವಿಶ್ವವಿದ್ಯಾನಿಲಯಕ್ಕೆ ರಾಜ್ಯಪಾಲರು ಹಾಗೂ ಉನ್ನತ ಶಿಕ್ಷಣ ಸಚಿವಾಲಯ ಅಪಾರ ವಿಶ್ವಾಸವನ್ನಿಟ್ಟು ನೀಡಲಾಗಿದೆ. ಹಾಗಾಗಿ, ಮೈಸೂರು ವಿವಿ ಕೆ-ಸೆಟ್‌ನ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಲು ನುರಿತ ಹಾಗೂ ಅನುಭವಿ ಪ್ರಾಧ್ಯಾಪಕರ ಸಮಿತಿಯನ್ನು ಈ ಹಿಂದೆ ರಚನೆ ಮಾಡಿತ್ತು, ಆದರೆ ಪ್ರಸ್ತುತ ಅಂತಹ ಸಮಿತಿಯೇ ಇಲ್ಲದಿರುವುದು ಇನ್ನಿಲ್ಲದ ಅಕ್ರಮಗಳಿಗೆ ಎಡೆಮಾಡಿಕೊಡುತ್ತದೆ ಎಂದು ದೂರಿದ್ದಾರೆ.

ಮೌಲ್ಯಮಾಪನ ಮತ್ತು ಉತ್ತರ ಪತ್ರಿಕೆ ಠೇವಣಿ ವಿಭಾಗದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳನ್ನು ತೆಗೆಯಲಾಗಿದೆ ಎಂದು ನನಗೆ ದೂರುಗಳು ಬಂದಿವೆ. ಕೆ-ಸೆಟ್‌ನಲ್ಲಿ ವಿದ್ಯಾರ್ಥಿಗಳು ಎಷ್ಟು ಉತ್ತರಗಳನ್ನು ಬರೆದಿದ್ದಾರೆ ಎಂಬುದನ್ನು ಉತ್ತರ ಪತ್ರಿಕೆಯಲ್ಲಿ ನಮೂದಿಸಲು ಸೂಚಿಸಬೇಕು ಹಾಗೂ ಪರೀಕ್ಷಾ ಸಭಾಂಗಣಗಳು, ಮೌಲ್ಯಮಾಪನ ಕೇಂದ್ರ ಮತ್ತು ಉತ್ತರ ಪತ್ರಿಕೆ ಸಂಗ್ರಹ ವಿಭಾಗದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ತಕ್ಷಣವೇ ಮರುಸ್ಥಾಪಿಸಬೇಕು ಎಂದು ಕೋರಿದ್ದಾರೆ.

ವಿಶ್ವವಿದ್ಯಾನಿಲಯದಲ್ಲಿ ಇಂತಹ ಅಕ್ರಮ ಮತ್ತು ತಪ್ಪುಗಳು ನಡೆಯುತ್ತಿವೆ ಎಂದು ಮುಲಾಜಿಲ್ಲದೆ ಹೇಳಬಹುದು. ಉದಾಹರಣೆಗೆ ಇತಿಹಾಸ ವಿಷಯದ ಕೆ-ಸೆಟ್‌ನ ಪರೀಕ್ಷೆಯ ತಾತ್ಕಾಲಿಕ ಮಾದರಿ ಉತ್ತರ ಪತ್ರಿಕೆಗಳಲ್ಲಿ 17 ಉತ್ತರಗಳು ತಪ್ಪಾಗಿ ಪ್ರಕಟವಾಗಿರುವುದು ಏನನ್ನು ಸೂಚಿಸುತ್ತದೆ? ನೀವೇ ಈ ಕೆಳಕಂಡ ವಿವರಗಳನ್ನು ನೋಡಬಹುದೆಂದು ಕೆ-ಸೆಟ್ ಬರೆದಂತಹ ವಿದ್ಯಾರ್ಥಿಗಳು ನನ್ನ ಗಮನಕ್ಕೆ ತಂದಿದ್ದಾರೆ ಎಂದು ಪತ್ರದಲ್ಲಿ ಬರೆದಿದ್ದಾರೆ.

× Chat with us