ವಿವೇಕಾನಂದರು ಪ್ರಬಲ ಜಾತಿಗೆ ಸೇರಿದ್ರೆ ಇಷ್ಟೊತ್ತಿಗೆ ಶಾಲೆ ಜಾಗದಲ್ಲಿ ಸ್ಮಾರಕ ನಿರ್ಮಾಣವಾಗ್ತಿತ್ತು: ಪ್ರತಾಪಸಿಂಹ

ಮೈಸೂರು: ಸ್ವಾಮಿ ವಿವೇಕಾನಂದರು ಪ್ರಬಲ ಜಾತಿಗೆ ಸೇರಿದವರಾಗಿದ್ದರೆ ಇಷ್ಟೊತ್ತಿಗೆ ಎನ್‌ಟಿಎಂ ಶಾಲೆಯಲ್ಲಿ ಅವರ ಸ್ಮಾರಕ ನಿರ್ಮಾಣವಾಗಿತ್ತಿತ್ತು ಎಂದು ಸಂಸದ ಪ್ರತಾಪಸಿಂಹ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವೇಕಾನಂದರು ಪ್ರಬಲ ಜಾತಿಗೆ ಸೇರಿದವರಲ್ಲ. ಹೀಗಾಗಿ, ಎನ್‌ಟಿಎಂ ಶಾಲೆಯಲ್ಲಿ ಅವರ ಸ್ಮಾರಕ ನಿರ್ಮಾಣ ವಿವಾದ ಇನ್ನೂ ಇದೆ. ಅವರು ಪ್ರಬಲ ಜಾತಿಗೆ ಸೇರಿದ್ದರೆ ಇಷ್ಟೊತ್ತಿಗೆ ಸ್ಮಾರಕ ನಿರ್ಮಾಣ ಆಗಿ ವರ್ಷಗಳೇ ಕಳೆಯುತ್ತಿದ್ದವು. ಅವರಿಗೆ ಜಾತಿ ಬೆಂಬಲ ಇಲ್ಲದ ಕಾರಣ ಈ ರೀತಿ ವಿವಾದ ಸೃಷ್ಟಿ ಮಾಡಲಾಗಿದೆ. ಇದು ಮೈಸೂರಿಗೆ ಆಗುತ್ತಿರುವ ಅವಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿವೇಕಾನಂದರು ಜಾತಿಯ ಐಕಾನ್ ಅಲ್ಲ, ಅವರು ರಾಷ್ಟ್ರದ ಐಕಾನ್. ಮಹಾರಾಜರೇ ಅವರನ್ನು ಪ್ರೀತಿ, ಗೌರವದಿಂದ ಕಂಡಿದ್ದಾರೆ. ಇದನ್ನು ನಾವು ಮೊದಲು ನೆನಪಿಟ್ಟುಕೊಳ್ಳಬೇಕು. ಸ್ಮಾರಕವನ್ನು ವಿರೋಧ ಮಾಡುತ್ತಿರುವುದು ನಾಚೀಕೆಗೇಡಿನ ಸಂಗತಿ. ಸಂಕುಚಿತ ಮನೋಭಾವದ ಜನ ಸ್ಮಾರಕದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಬೆಂಗಳೂರಿನ ಫ್ಲೈ ಓವರ್‌ಗೆ ಹೆಸರಿಡುವ ವಿಚಾರದಲ್ಲೂ ಹೀಗೆ ಮಾಡಿದರು. ಬಳಿಕ ಸಾರ್ವಕರ್ ಹೆಸರನ್ನು ನಾಮಕರಣ ಮಾಡಲಾಯಿತು. ಮೈಸೂರಿನಲ್ಲೂ ಕೆಲ ಸಂಕುಚಿತ ಜನರು ಶಾಲೆಯ‌ ನೆಪದಲ್ಲಿ ಹೋರಾಟ ಮಾಡುತ್ತಿದ್ದಾರೆ. ಬೇಕಿದ್ದರೆ ಈ ಶಾಲೆಯನ್ನು ಮುಂಭಾಗದ ಕಟ್ಟಡಕ್ಕೆ ಸ್ಥಳಾಂತರಿಸಬಹುದು ಮಾಡಬಹುದು ಅಥವಾ ಕೂಗಳತೆಯ ದೇವರಾಜ ಶಾಲೆಗೆ ವರ್ಗಾಯಿಸಬಹುದು. ಸಿಎಂ ಈ ಸರ್ಕಾರಿ ಶಾಲೆಯ ಜಾಗ ಹಸ್ತಾಂತರಕ್ಕೆ ಆದೇಶ ಮಾಡಿಕೊಡಲಿ. ನಾನು ಕೇವಲ ಎರಡೇ ಗಂಟೆಯಲ್ಲಿ ಕನ್ನಡ ಮಕ್ಕಳಿಗೆ ಅನ್ಯಾಯವಾಗದಂತೆ ಶಾಲೆಯನ್ನು ಶಿಫ್ಟ್ ಮಾಡಿ ಸ್ಮಾರಕ ನಿರ್ಮಾಣಕ್ಕೆ ಮುಂದಾಗುತ್ತೇನೆ ಎಂದು ಭರವಸೆ ನೀಡಿದರು.

ಮೈಸೂರಿನಲ್ಲಿ ಮತ್ತೊಂದು‌ ಫ್ಲೈಓವರ್ ನಿರ್ಮಾಣಕ್ಕೆ ಮೇಟಗಳ್ಳಿ ಬಳಿಯ ರಿಂಗ್‌ ರಸ್ತೆಯಲ್ಲಿ ಸ್ಥಳ ಪರಿಶೀಲನೆ ನಡೆಸಲಾಯಿತು. ಸಂಸದ ಪ್ರತಾಪಸಿಂಹ, ರೈಲ್ವೆ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಡನೆ ರಾಷ್ಟ್ರೀಯ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ವಿಜಯ್ ಕುಮಾರ್ ಸ್ಥಳ ಪರಿಶೀಲಿಸಿದರು. ಈ ವೇಳೆ ಮುಡಾ ಅಧ್ಯಕ್ಷ ರಾಜೀವ್, ಚೆಸ್ಕಾಂ ಅಧಿಕಾರಿಗಳು ಭಾಗಿಯಾಗಿದ್ದರು.

× Chat with us