ಅಕ್ರಮ ಹಣ ವರ್ಗಾವಣೆ: ಇಡಿ ತನಿಖೆಗೆ ಮಮತಾ ಬ್ಯಾನರ್ಜಿ ಸೋದರಳಿಯ ಹಾಜರ್

ಹೊಸದಿಲ್ಲಿ: ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸೋದರಳಿಯ, ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಸೋಮವಾರ ಜಾರಿ ನಿರ್ದೇಶನಾಲಯ (ಇಡಿ) ಮುಂದೆ ಹಾಜರಾಗಿದ್ದು, ಅಧಿಕಾರಿಗಳು ಅವರನ್ನು ವಿಚಾರಣೆಗೆ ಒಳಪಡಿಸಿದರು.

33ರ ಹರೆಯದ ಅಭಿಷೇಕ್ ಬ್ಯಾನರ್ಜಿ ಮಧ್ಯ ದೆಹಲಿಯಜಾಮ್ ನಗರದಲ್ಲಿರುವ ಇಡಿ ಕಚೇರಿಗೆ 11 ಗಂಟೆಗೆ ಮುಂಚಿತವಾಗಿ ಬಂದರು.

ನಾನು ತನಿಖೆಯನ್ನು ಎದುರಿಸಲು ಸಿದ್ಧನಿದ್ದೇನೆ ಮತ್ತು ನಾನು ಸಂಸ್ಥೆ ಜೊತೆ ಸಹಕರಿಸುತ್ತೇನೆ ಎಂದು ವಿಚಾರಣೆಗೆ ಮುನ್ನ ಸುದ್ದಿಗಾರರಿಗೆ ಹೇಳಿದರು.

ಪ್ರಕರಣದ ತನಿಖಾಧಿಕಾರಿಯು ಬ್ಯಾನರ್ಜಿಯವರ ಹೇಳಿಕೆಯನ್ನು ಮನಿ ಲಾಂಡರಿಂಗ್ ಕಾನೂನು (ಪಿಎಂಎಲ್‌ಎ) ನಿಬಂಧನೆಗಳ ಅಡಿಯಲ್ಲಿ ದಾಖಲಿಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಭಿಷೇಕ್ ಬ್ಯಾನರ್ಜಿ ಲೋಕಸಭೆಯಲ್ಲಿ ಪಶ್ಚಿಮ ಬಂಗಾಳದ ಡೈಮಂಡ್ ಹಾಬರ್ ಸ್ಥಾನವನ್ನು ಪ್ರತಿನಿಧಿಸುತ್ತಿದ್ದು, ತೃಣಮೂಲ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

ಈಸ್ಟರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ ಗಣಿಗಳಿಗೆ ಸಂಬಂಧಿಸಿದ ಬಹುಕೋಟಿ ಕಲ್ಲಿದ್ದಲು ಹಗರಣದ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಸಿಬಿಐ 2020ರಲ್ಲಿ ಎಫ್‌ಐಆರ್ ಪರಾಮರ್ಶೆ ಮಾಡಿದ ನಂತರ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ.

× Chat with us