ಅಕ್ಕ ನಮ್ಮ ಕ್ಷೇತ್ರದಲ್ಲೂ ನಡೀತಿರೋ ಅಕ್ರಮ ಗಣಿಗಾರಿಕೆ ನಿಲ್ಲಿಸ್ಕೊಡಿ: ಸುಮಲತಾಗೆ ಸುರೇಶ್‌ ಗೌಡ ಮನವಿ

ನಾಗಮಂಗಲ: ಅಕ್ಕ ನಮ್ಮ ಕ್ಷೇತ್ರದಲ್ಲೂ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ದಯಮಾಡಿ ಅದನ್ನು ನಿಲ್ಲಿಸಿಕೊಡಿ ಎಂದು ಜೆಡಿಎಸ್‌ ಶಾಸಕ ಸುರೇಶ್‌ ಗೌಡ ಮನವಿ ಮಾಡಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʻಸುಮಲತಾ ಅಕ್ಕ ಅವರು ಅಕ್ರಮ ಗಣಿಗಾರಿಕೆ ವಿರುದ್ಧ ದನಿ ಎತ್ತಿದ್ದಾರೆ. ಅವರೊಟ್ಟಿಗೆ ನಾವೂ ಇರುತ್ತೇವೆ. ಹೋರಾಟ ಮಾಡಿ ನಮ್ಮ ಕ್ಷೇತ್ರದಲ್ಲೂ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ನಿಲ್ಲಿಸಿಕೊಡಲಿ. ಕಾನೂನಾತ್ಮಕವಾಗಿ ಗಣಿಗಾರಿಕೆಗಳು ನಡೆಯುವಂತೆ ಮಾಡಿಸಲಿʼ ಎಂದು ಕುಟುಕಿದರು.

ಮಂಡ್ಯ ಜಿಲ್ಲೆಯಲ್ಲೇ ನಮ್ಮ ತಾಲ್ಲೂಕಿನಲ್ಲಿ ಹೆಚ್ಚಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಈ ಬಗ್ಗೆ ವಿಧಾನಸೌಧದ ಮಟ್ಟಿಗೂ ಗಮನಕ್ಕೆ ತರಲಾಗಿದೆ. ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಅಕ್ರಮ ಗಣಿಗಾರಿಕೆಯನ್ನು ಸಕ್ರಮ ಮಾಡುವುದಾಗಿ ಸಿಎಂ ಯಡಿಯೂರಪ್ಪ ಅವರೇ ಹೇಳಿದ್ದಾರೆ. ಈಗ ನಾವೇನು ಮಾಡುವುದು ಎಂದು ಪ್ರಶ್ನಿಸಿದರು.

ಯಾವುದೇ ರಾಜಕಾರಣಿ ಸ್ವಾರ್ಥ ಇಲ್ಲದೇ ಯಾವ ಕೆಲಸವನ್ನೂ ಮಾಡುವುದಿಲ್ಲ. ಬಹುತೇಕ ಮುಂದೆ ನಾವೂ ಹಾಗೆಯೇ ಆಗುತ್ತೇವೋ ಗೊತ್ತಿಲ್ಲ ಎಂದು ತಿಳಿಸಿದರು.

ಅಧಿಕಾರದಲ್ಲಿದ್ದಾಗ ರಾಜಕಾರಣಿಗಳು ಏನು ಮಾಡಿದರು ಎಂಬುದಕ್ಕೆ ಸಾಕ್ಷಿ ಇರುತ್ತದೆ. ಎಚ್‌.ಡಿ.ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ನೀರಾವರಿ, ರಸ್ತೆ ಅಭಿವೃದ್ಧಿ ಸೇರಿದಂತೆ ಸಾಕಷ್ಟು ಕೊಡಗೆ ನೀಡಿದ್ದಾರೆ. ಅದಕ್ಕೆ ಸಾಕ್ಷಿಯೂ ಇದೆ. ಮಂಡ್ಯ ಜಿಲ್ಲೆಗೆ ಇವರೇನು (ಸುಮಲತಾ) ಮಾಡಿದ್ದಾರೆ ಎಂಬುದಕ್ಕೆ ಸಾಕ್ಷಿ ತೋರಿಸಲಿ ಎಂದು ಕೇಳಿದರು.

ತಮ್ಮ ತಪ್ಪನ್ನು ಮುಚ್ಚಿಟ್ಟುಕೊಂಡು ಜನರ ಗಮನ ಬೇರೆಡೆ ಸೆಳೆಯಲು ಈ ರೀತಿ ಮಾಡುತ್ತಿದ್ದಾರೆ. ಇವರು ಜಿಲ್ಲೆಗೆ ಏನೂ ಕೆಲಸ ಮಾಡದ ಕಾರಣ ಜನರು ಛೀಮಾರಿ ಹಾಕುತ್ತಿದ್ದಾರೆ. ಅದನ್ನು ಬೇರೆಡೆ ಸೆಳೆಯಲು ಈ ರೀತಿ ಮಾಡಿದ್ದಾರೆ ಎಂದು ಸುಮಲತಾ ಅವರ ಹೆಸರನ್ನು ಪ್ರಸ್ತಾಪಿಸಿದೇ ಟೀಕಿಸಿದರು.

× Chat with us