ಶಾಲೆ ಕೆಡವಿ ಸ್ಮಾರಕ ಕಟ್ಬೇಕು ಎನ್ನುವವರ ಮನಸ್ಸಿನಲ್ಲಿ ವಿವೇಕಾನಂದರಿಲ್ಲ: ಶಾಸಕ ಎನ್.ಮಹೇಶ್‌

ಮೈಸೂರು: ಶಾಲೆಯನ್ನು ತೆರವುಗೊಳಿಸಿ ಸ್ಮಾರಕ ಕಟ್ಟಬೇಕು ಎನ್ನುವವರ ಮನಸ್ಸಿನಲ್ಲಿ ಸ್ವಾಮಿ ವಿವೇಕಾನಂದರಿಲ್ಲ ಎಂದು ಶಾಸಕ ಎನ್.ಮಹೇಶ್‌ ಹೇಳಿದರು.

ಎನ್‌ಟಿಎಂ ಶಾಲೆ ಉಳಿವಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಭಾನುವಾರ ಮಾತನಾಡಿದ ಅವರು, ಶಾಲೆ ತೆಗೆದು ಸ್ಮಾರಕ ಕಟ್ಟಬೇಕು ಎನ್ನುವವರ ಮನಸ್ಸಿನಲ್ಲಿ ವಿವೇಕಾನಂದರಿರುವುದಿಲ್ಲ. ಅಂತಹವರೇ ಇಲ್ಲಿ ಹೆಚ್ಚಾಗಿದ್ದಾರೆ. ಈ ವಿವಾದಕ್ಕೆ ಹೆಚ್ಚು ಅವಕಾಶ ನೀಡದೇ, ಶಾಲೆಯೂ ಇರಲಿ ಸ್ಮಾರಕವೂ ಆಗಲಿ ಎನ್ನುವಂತೆ ಸರ್ಕಾರ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಾಯಿ ಕೊಡೆಗಳಂತೆ ಹಬ್ಬುತ್ತಿರುವ ಖಾಸಗಿ ಶಾಲೆಗಳ ಸಂದರ್ಭದಲ್ಲಿ ಈ ಶಾಲೆ ಸೊರಗಿದೆ. ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಶಾಲೆಯನ್ನು ಅತಿಕ್ರಮಿಸುವುದಕ್ಕೆ ನನ್ನ ವಿರೋಧವಿದೆ. ನಾನು ವಿವೇಕಾನಂದರ ಅಭಿಮಾನಿ. ದೊಡ್ಡ ವ್ಯಕ್ತಿತ್ವದ ಹೆಸರಿನಲ್ಲಿ ವಿವಾದ ಸೃಷ್ಟಿಸುವುದು ಸರಿಯಲ್ಲ ಎಂದು ತಿಳಿಸಿದರು.

ಶತಮಾನ ಕಂಡಿರುವ ಶಾಲೆಗಳನ್ನು ಪುನರುಜ್ಜೀವನಗೊಳಿಸಬೇಕು ಎಂದು ಕರ್ನಾಟಕ ಸರ್ಕಾರದ ಆದೇಶವಿದೆ. ಶತಮಾನ ದಾಟಿರುವ ಈ ಶಾಲೆಯನ್ನೂ ಪುನರುಜ್ಜೀವನಗೊಳಿಸಿ ಕರ್ನಾಟಕ ಪಬ್ಲಿಕ್‌ ಶಾಲೆ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದರು.

× Chat with us