ಸಚಿವ ಸ್ಥಾನ ಸಿಗದ ಬೇಸರಕ್ಕೆ ವಿಶ್ವನಾಥ್‌ರಿಂದ ಆರೋಪ: ಶಾಸಕ ನಾಗೇಂದ್ರ ಬೇಸರ

ಮೈಸೂರು: ಅಡಗೂರು ಎಚ್.ವಿಶ್ವನಾಥ್ ಅವರು ಮಂತ್ರಿ ಸ್ಥಾನ ಸಿಗಲಿಲ್ಲವೆಂಬ ಒಂದೇ ಕಾರಣಕ್ಕೆ ವಿನಾಕಾರಣ ಆರೋಪಗಳನ್ನು ಮಾಡುತ್ತಿರುವುದು ಸರಿಯಲ್ಲ. ಇದರ ಅವಶ್ಯಕತೆ ಏನಿದೆ? ಮುಂದಿನ ದಿನಗಳಲ್ಲಿ ಅವರು ತಮ್ಮ ವರ್ತನೆಯನ್ನು ಸರಿಪಡಿಸಿಕೊಳ್ಳಬೇಕು ಎಂದು ಶಾಸಕ ಎಲ್.ನಾಗೇಂದ್ರ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವನಾಥ್ ಅವರ ಈ ವರ್ತನೆ ಹೊಸದಲ್ಲ. ಪದೇ ಪದೇ ಏನನ್ನಾದರೂ ಮಾತನಾಡುತ್ತಿರು ತ್ತಾರೆ. ಅವರಿಗೆ ತಾವು ಮಾತನಾಡಿದರೆ, ದೊಡ್ಡವರು ಎನಿಸಿಕೊಳ್ಳಬಹುದು ಎಂಬ ಭ್ರಮೆ ಇದ್ದಂತಿದೆ. ಆ ರೀತಿಯ ಭಾವನೆಗಳಿದ್ದರೆ ದಯವಿಟ್ಟು ಅದನ್ನು ಮನಸ್ಸಿ ನಿಂದ ತೆಗೆದು ಹಾಕಬೇಕು. ಅವರ ಧೋರಣೆಯೇ ಸರಿಯಿಲ್ಲ. ಇದೇ ರೀತಿ ಪಕ್ಷದ ವಿರುದ್ಧ ಮಾತನಾಡುತ್ತಿದ್ದರೆ ಕೇಂದ್ರ ಹಾಗೂ ರಾಜ್ಯದ ನಾಯಕರು ಅವರ ವಿಚಾರದಲ್ಲಿ ಯಾವ ಕ್ರಮ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ ಎಂದು ತಿಳಿಸಿದರು.

ವಿಶ್ವನಾಥ್ ಅವರಿಗೆ ನಮ್ಮ ಪಕ್ಷದ ಸಿದ್ಧಾಂತಗಳು ತಿಳಿದಿಲ್ಲ. ಒಂದು ಪಕ್ಷದಲ್ಲಿರುವವರು ಮುಖಂಡರ ಮೇಲೆ ಆರೋಪ ಮಾಡುವುದು ಸರಿಯಲ್ಲ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಒಂದೊಂದು ಇಂಚು ಲೆಕ್ಕವನ್ನೂ ಪರಿಶೀಲಿಸುತ್ತಾರೆ. ಇವರು ಯಾರದ್ದೋ ಮಾತು ಕೇಳಿಕೊಂಡು ಸುಮ್ಮನೆ ಹೇಳಿಕೆ ಕೊಡುತ್ತಿದ್ದಾರೆ. ಅವರಿಗೆ ನಿಜವಾಗಿಯೂ ಅಕ್ರಮ, ಅವ್ಯವಹಾರಗಳು ಕಂಡುಬಂದರೆ ಮಾತ್ರ ಮಾತನಾಡಲಿ ಅಥವಾ ಮುಖ್ಯಮಂತ್ರಿಗೆ ನೇರವಾಗಿ ತಿಳಿಸಲಿ. ಅದನ್ನು ಬಿಟ್ಟು ಈ ರೀತಿ ಮಾತುಗಳನಾಡುವುದು ತಪ್ಪು ಎಂದರು.

× Chat with us