ನಾಪತ್ತೆಯಾಗಿದ್ದ ವ್ಯಕ್ತಿ ಮನೆ ಹಿಂಭಾಗದ ಶೌಚಗುಂಡಿಯಲ್ಲಿ ಶವವಾಗಿ ಪತ್ತೆ!

ಹನೂರು: ಕಳೆದ 4 ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಮನೆಯ ಹಿಂಭಾಗದ ಶೌಚಗುಂಡಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ತಾಲ್ಲೂಕಿನ ಗುಂಡಿಮಾಳ ಗ್ರಾಮದಲ್ಲಿ ಜರುಗಿದೆ.

ಗುಂಡಿಮಾಳ ಗ್ರಾಮದ ರಾಜಶೇಖರಮೂರ್ತಿ ಎಂಬಾತನೇ ಮೃತಪಟ್ಟಿರುವ ವ್ಯಕ್ತಿಯಾಗಿದ್ದು, ಈತನ ಶವ ಅವರ ಮನೆಯ ಹಿಂಭಾಗದ ಶೌಚಾಲಯದ ಗುಂಡಿಯಲ್ಲಿ ಪತ್ತೆಯಾಗಿದೆ.

ಘಟನೆ ವಿವರ: ಗುಂಡಿಮಾಳ ಗ್ರಾಮದ ರಾಜಶೇಖರಮೂರ್ತಿ ಜೂನ್ 24ರಿಂದ ಕಾಣೆಯಾಗಿದ್ದಾನೆ ಎಂಬುದಾಗಿ ಜೂನ್ 26ರಂದು ಆತನ ತಂದೆ ಮಹಾದೇವಸ್ವಾಮಿ ಹನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಇಂದು ಗ್ರಾಮದಲ್ಲಿ ರಾಜಶೇಖರಮೂರ್ತಿಯ ಕೊಲೆಯಾಗಿದೆ ಎಂಬುವ ಮಾತುಗಳು ಕೇಳಿಬರುತ್ತಿದ್ದವು. ಇದಕ್ಕೆ ಇಂಬು ನೀಡುವಂತೆ ಅವರ ಮನೆಯ ಹಿಂಬಾಗದ ಶೌಚಗೃಹದಿಂದ ದುರ್ವಾಸನೆ ಬರಲು ಪ್ರಾರಂಭಿಸಿತ್ತು. ಈ ವೇಳೆಗೆ ಈ ಬಗ್ಗೆ ಅನುಮಾನಗೊಂಡ ಗ್ರಾಮಸ್ಥರು ಕೂಡಲೇ ಹನೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕಾಗಮಿಸಿದ ಹನೂರು ಸಿಪಿಐ ಸಂತೋಷ್ ಕಶ್ಯಪ್ ಮತ್ತು ಸಿಬ್ಬಂದಿ ಸ್ಥಳಕ್ಕಾಗಮಿಸಿ ಗುಂಡಿಯನ್ನು ತೆಗೆಸಿ ನೋಡಿದಾಗ ರಾಜಶೇಖರಮೂರ್ತಿಯ ಶವ ದೊರೆತಿದೆ. ಕೂಡಲೇ ಮೃತದೇಹವನ್ನು ಚಾಮರಾಜನಗರ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ರವಾನಿಸಿ ತನಿಖೆ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಪೇದೆಗಳಾದ ರಾಘವೇಂದ್ರ, ಬಿಳಿಗೌಡ, ರಾಮಶೆಟ್ಟಿ ಇನ್ನಿತರರು ಹಾಜರಿದ್ದರು.

× Chat with us