ಕೊಡಗು: ಗಡಿಭಾಗ ಕುಟ್ಟ ಕೋವಿಡ್ ಕೇಂದ್ರಕ್ಕೆ ಸಚಿವ ವಿ.ಸೋಮಣ್ಣ ಭೇಟಿ

ಪೊನ್ನಂಪೇಟೆ: ಗಡಿಭಾಗದ ಕುಟ್ಟ ಕೋವಿಡ್‌ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಕೊರೊನಾ ಸೋಂಕಿತರ ಆರೋಗ್ಯ ವಿಚಾರಿಸಿದರು.

ಆಸ್ಪತ್ರೆಯ ಕುಂದು ಕೊರತೆಗಳ ಕುರಿತು ಸಂಬಂಧಿಸಿದ ವೈದ್ಯರಿಂದ ಮಾಹಿತಿ ಪಡೆದರು.

ನಂತರ ಮಾತನಾಡಿದ ಅವರು, ಕೊರೊನಾ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಿ. ಆಕ್ಸಿಜನ್ ಸೇರಿದಂತೆ ಎಲ್ಲ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಜಿಲ್ಲಾಧಿಕಾರಿಗಳು ಈ ಕುರಿತು ಹೆಚ್ಚಿನ ನಿಗಾ ವಹಿಸಬೇಕು. ಲಸಿಕಾ ಅಭಿಯಾನವನ್ನು ಚುರುಕುಗೊಳಿಸಬೇಕು ಎಂದು ಸಲಹೆ ನೀಡಿದರು.

ಕೇರಳ ಗಡಿಭಾಗವಾಗಿರುವ ಕುಟ್ಟ ಚೆಕ್ ಪೋಸ್ಟ್ ಬಳಿ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಿದರು. ಕೇರಳದಿಂದ ಬರುವಂತಹ ವಾಹನಗಳ ತಪಾಸಣೆ ಮತ್ತು ಕೋವಿಡ್ ನಿಯಮಗಳನ್ನು ಪಾಲಿಸಲಾಗುತ್ತಿದೆಯೇ ಎಂದು ಪರಿಶೀಲನೆ ಮಾಡಿ ಚೆಕ್ ಪೋಸ್ಟ್‌ನ ಸರ್ಕಲ್ ಇನ್‌ಸ್ಪೆಕ್ಟರ್‌ ಪರಶಿವಮೂರ್ತಿ ಅವರಿಗೆ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸಬೇಕು ಎಂದು ಸೂಚಿಸಿದರು.

× Chat with us