ರೇಷನ್‌ ಕೇಳಿದ ರೈತನಿಗೆ ಸಾಯೋದು ಒಳ್ಳೆಯದೆಂದ ಕತ್ತಿ: ಆಡಿಯೋ ವೈರಲ್‌, ವ್ಯಾಪಕ ಟೀಕೆ

ಬೆಳಗಾವಿ: ಪಡಿತರ ಅಕ್ಕಿ ಕೇಳಿದ ರೈತನೊಬ್ಬನಿಗೆ ಸಾಯುವುದು ಉತ್ತಮ ಎಂದಿರುವ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ಅವರ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿರುವ ಕತ್ತಿ ಅವರು ಆಡಿಯೋದಲ್ಲಿರುವ ಧ್ವನಿ ನನ್ನದಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಆದರೂ ಸಚಿವರ ದರ್ಪದ ಮಾತಿನ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಬಡವರ ಹಸಿವು ಸಚಿವರಿಗೆ ಅರ್ಥವಾಗುವುದಿಲ್ಲ. ಅವರು ಈಗಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆಗ್ರಹಿಸಿದ್ದಾರೆ.

ಆಗಿದ್ದೇನು?: ಗದಗ ಜಿಲ್ಲೆಯ ರೈತ ಸಂಘದ ಕಾರ್ಯಕರ್ತ ಈಶ್ವರ ಎನ್ನುವವರು ಸಚಿವರ ಮೊಬೈಲ್‌ ಫೋನ್‌ಗೆ ಕರೆ ಮಾಡಿದ್ದರು.

‘ಲಾಕ್‌ಡೌನ್‌ ಸಂದರ್ಭದಲ್ಲೂ ಕೇವಲ 2 ಕೆ.ಜಿ. ಅಕ್ಕಿ ಕೊಡುತ್ತಿದ್ದೀರಿ. ಇಷ್ಟು ಕಡಿಮೆ ಅಕ್ಕಿಯಲ್ಲಿ ನಾವು ಬದುಕುವುದಾದರೂ ಹೇಗೆ?’ ಎಂದು ಕೇಳಿದ್ದಾರೆ.

ಉತ್ತರಿಸಿದ ಸಚಿವರು, ‘2 ಕೆ.ಜಿ. ಅಕ್ಕಿ ಜೊತೆಗೆ 3 ಕೆ.ಜಿ. ರಾಗಿ ಕೊಡುತ್ತಿದ್ದೇವೆ. ಉತ್ತರ ಕರ್ನಾಟಕ ಭಾಗಕ್ಕೆ 3 ಕೆ.ಜಿ. ಜೋಳ ನೀಡುತ್ತಿದ್ದೇವೆ. ಒಟ್ಟು 5 ಕೆ.ಜಿ. ಪಡಿತರ ವಿತರಿಸಲಾಗುತ್ತಿದೆ’ ಎಂದು ಹೇಳಿದ್ದಾರೆ.

ಬರುವ ತಿಂಗಳು ಈ ಎಲ್ಲವನ್ನೂ ಪೂರೈಸಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ. ಅದಕ್ಕೆ ಪ್ರಶ್ನಿಸಿದ ರೈತನು ಅಲ್ಲಿಯವರೆಗೂ ಹಸಿದು ಸಾಯುವುದಾ ಸರ್‌ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಕತ್ತಿ ಅವರು, ಸತ್ತು ಹೋದರೆ ಒಳ್ಳೆಯದು. ಅದಕ್ಕಿಂತ, ಅಕ್ಕಿ ಮಾರುವ ದಂದೆ ಬಂದ್ ಮಾಡಿ. ಮತ್ತೆ ಫೋನ್ ಮಾಡಬೇಡಿ ಎಂದು ಕರೆ ಕಟ್‌ ಮಾಡಿದ್ದಾರೆ.

× Chat with us