ನಾನು ಸಿಎಂ ಅಥವಾ ಡಿಸಿಎಂ ಆಗಬೇಕೆಂದು ಬೆಂಬಲಿಗರು ಬಯಸಿದ್ರು: ಈಶ್ವರಪ್ಪ

ಮೈಸೂರು: ನಾನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆಗಬೇಕು ಎಂದು ಬೆಂಬಲಿಗರು ಬಯಸಿದ್ದರು. ಇದರ ಮಧ್ಯೆ, ಸಚಿವನೂ ಆಗುವುದಿಲ್ಲ ಎಂದು ಕೆಲವರು ಬಿಂಬಿಸಿದ್ದರು. ಆದರೆ, ಹೈಕಮಾಂಡ್‌ ನನ್ನನ್ನು ಹೇಗೆ ಪರಿಗಣಿಸಿದೆ ಎಂದು ಎಲ್ಲರಿಗೂ ಗೊತ್ತಾಗಿದೆ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ನಗರದಲ್ಲಿ ಗುರುವಾರ ಸುತ್ತೂರು ಮಠಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈವರೆಗೆ ಬಿಜೆಪಿಗೆ ಸಂಪೂರ್ಣ ಬಹುಮತ ಬಂದಿಲ್ಲ. ಹೊರಗಿನವರ ಸಹಕಾರ ಪಡೆದುಕೊಂಡು ಸರ್ಕಾರ ರಚನೆ ಮಾಡಿದ್ದೇವೆ. ಮುಂದಿನ ಬಾರಿ ಬಿಜೆಪಿಗೆ ಸಂಪೂರ್ಣ ಬಹುಮತ ಸಿಗಲಿದೆ. ಆಗ ಜಾತಿ ವಿಚಾರ ಬರುವುದಿಲ್ಲ. ರಾಷ್ಟ್ರವಾದಿಯನ್ನು ಬಿಜೆಪಿ ಮುಖ್ಯಮಂತ್ರಿ ಮಾಡುತ್ತದೆ ಎಂದು ತಿಳಿಸಿದರು.

ಬೊಮ್ಮಾಯಿ ಬೆಟ್ಟ ಅಗೆದು ಇಲಿ ಹಿಡಿದಿದ್ದಾರೆ ಎಂಬ ಸಿದ್ದರಾಮಯ್ಯ ಟೀಕೆ ಕುರಿತು ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಹಸಿವಿನಿಂದ ವಿಲ ವಿಲ ಒದ್ದಾಡುತ್ತಿರುವ ಇಲಿ. ಸಿದ್ದರಾಮಯ್ಯ ಹುಲಿಯಾಗುತ್ತಾರೆ ಅಂದುಕೊಂಡಿದ್ದೆವು. ಆದರೆ, ಅವರು ಇಲಿಯಾಗಿ ವಿಲ ವಿಲ‌ ಒದ್ದಾಡುತ್ತಿದ್ದಾರೆ. ಅವರು ರಾಜ್ಯಕ್ಕೆ ಹುಲಿಯಾಗುವ ಬದಲು ಡಿ.ಕೆ.ಶಿವಕುಮಾರ್ ಮೇಲೆ ಹುಲಿಯಾಗಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ನಿಂತು ಹೇಳುತ್ತಿದ್ದೇನೆ. ಪರಮೇಶ್ವರ್ ಅವರನ್ನು ಸೋಲಿಸಿದ್ದು ಸಿದ್ದರಾಮಯ್ಯ. ತಮ್ಮ ಸಿಎಂ ಸ್ಥಾನಕ್ಕೆ ಅಡ್ಡಿಯಾಗುತ್ತಾರೆ ಎಂದು ಸೋಲಿಸಿದರು ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಒಬ್ಬ ಕುರುಬರನ್ನು ಬೆಳೆಸಲಿಲ್ಲ. ನೆಪ ಮಾತ್ರಕ್ಕೆ ತಾತ್ಕಾಲಿಕವಾಗಿ ಕೆಲವು ಕುರುಬರನ್ನು ಸಚಿವರನ್ನಾಗಿ ಮಾಡಿದ್ದರು. ಪೂರ್ಣಾವಧಿಯಲ್ಲಿ ಯಾರಿಗೂ ಸಚಿವ ಸ್ಥಾನ ನೀಡಲಿಲ್ಲ ಎಂದು ಟೀಕಿಸಿದರು.

ಇದೇ ವೇಳೆ ಈಶ್ವರಪ್ಪ ಅವರು ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.

× Chat with us