ಸಚಿವರಿದ್ದ ಕಾರು, ಬೈಕ್‌ ನಡುವೆ ಅಪಘಾತ; ಮುಂದೇನಾಯ್ತು?!

ಮೈಸೂರು: ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರು ಮೈಸೂರು ನಗರಕ್ಕೆ ಬರುತ್ತಿದ್ದಾಗ ಸಚಿವರ ಕಾರು ಮತ್ತು ಬೈಕ್ ನಡುವೆ ಅಪಘಾತವಾಗಿರುವ ಘಟನೆ ಸಯ್ಯಾಜಿರಾವ್ ರಸ್ತೆಯ ಆರ್‌ಎಂಸಿ ಬಳಿ ನಡೆದಿದೆ.

ಸಿ.ಸಿ.ಪಾಟೀಲ ಅವರು ಮಂಗಳವಾರ ಇಲ್ಲಿನ ವಿದ್ಯಾರಣ್ಯಪುರಂ ಉದ್ಯಾನದಲ್ಲಿ ಶಾಸಕ ಎಸ್.ಎ.ರಾಮದಾಸ್ ಅವರು ಆಯೋಜಿಸಿದ್ದ ‘ಮೋದಿ ಯುಗ್ ಉತ್ಸವ್’ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬರುತ್ತಿದ್ದ ವೇಳೆ ಘಟನೆ ನಡೆದಿದೆ.

ಬೈಕ್ ಸವಾರ ರವಿಕುಮಾರ್ (40) ಗಾಯಗೊಂಡರು. ಬೈಕ್ ಸವಾರ, ಕಾರಿನ ಒಂದು ಭಾಗಕ್ಕೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದು, ಅವರ ಎಡಗಾಲಿಗೆ ಗಾಯಗಳಾದವು. ಕೂಡಲೇ ಅವರನ್ನು ಪೊಲೀಸ್ ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಲಾಯಿತು.

ರವಿಕುಮಾರ್ ಅವರು ಮದ್ಯಸೇವಿಸಿ ವಾಹನ ಚಾಲನೆ ಮಾಡುತ್ತಿದ್ದರು ಎನ್ನಲಾಗಿದೆ.

ಸದ್ಯ ಎರಡೂ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಗಾಗಿ ರವಿಕುಮಾರ್ ವಿರುದ್ಧ ಐಪಿಸಿ 279, 337ರ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ನಡೆದ ಕೂಡಲೇ ಜನರ ಗುಂಪು ಸಚಿವರ ಕಾರನ್ನು ಸುತ್ತುವರೆದು ಗಲಾಟೆ ಆರಂಭಿಸಿತು. ಸಮೀಪದಲ್ಲೇ ಇದ್ದ ಪೊಲೀಸರು ಮಧ್ಯಪ್ರವೇಶಿಸಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದ ಬಳಿಕ ಪರಿಸ್ಥಿತಿ ತಿಳಿಯಾಯಿತು.

× Chat with us