ನಟ ವಿಷ್ಣುವರ್ಧನ್‌ ಕುರಿತ ಕಿರುಹೊತ್ತಿಗೆ ಬಿಡುಗಡೆ ಮಾಡಿದ ಸಚಿವ ನಾಗೇಶ್‌

ಬೆಂಗಳೂರು: ಚಲನಚಿತ್ರ ನಟ ಡಾ. ವಿಷ್ಣುವರ್ಧನ್‍ ಅವರ ಕುರಿತಾದ ಕಿರುಹೊತ್ತಿಗೆಯನ್ನು ಸಚಿವ ಬಿ.ಸಿ.ನಾಗೇಶ್ ಗುರುವಾರ ಬಿಡುಗಡೆ ಮಾಡಿದರು.

ಡಾ. ವಿಷ್ಣುವರ್ಧನ್ ಅವರ 71ನೇ ಜನ್ಮದಿನದ ಅಂಗವಾಗಿ ಡಾ.ವಿಷ್ಣುಸೇನಾ ಸಮಿತಿಯು ʻಕರುನಾಡ ಯಜಮಾನ ಡಾ.ವಿಷ್ಣುವರ್ಧನ್’ ಎಂಬ ಕಿರುಹೊತ್ತಿಗೆಯನ್ನು ಶಾಲಾ ಮಕ್ಕಳಿಗೆ ಉಚಿತವಾಗಿ ವಿತರಿಸುವ ದೃಷ್ಠಿಯಿಂದ ಹೊರತಂದಿದೆ. ಸದರಿ ಕೃತಿಯನ್ನು ಕನಿಷ್ಟ ಒಂದು ಲಕ್ಷ ಮಕ್ಕಳಿಗೆ ವಿತರಿಸುವ ಗುರಿಯನ್ನು ಹೊಂದಿದೆ.

ಡಾ.ಶರಣು ಹುಲ್ಲೂರ್ ಅವರು ಬರೆದ ಕರುನಾಡ ಯಜಮಾನ ಡಾ.ವಿಷ್ಣುವರ್ಧನ ಎಂಬ ಕಿರುಹೊತ್ತಿಗೆಯನ್ನು ಸಚಿವರು ತಮ್ಮ ಕಚೇರಿಯಲ್ಲಿ ಇಂದು (ಗುರುವಾರ) ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಸಿನಿಮಾ, ಜನಪರ ಕಾರ್ಯಗಳ ಮೂಲಕ ಡಾ.ವಿಷ್ಣುವರ್ಧನ್ ಅವರು ಯಾವತ್ತಿಗೂ ನಮ್ಮೊಂದಿಗೆ ಇರುತ್ತಾರೆ. ಅವರ ಆದರ್ಶ ಬದುಕು, ನಾಡು, ನುಡಿಯ ಬಗೆಗಿನ ಅಭಿಮಾನ ಮತ್ತು ಜೀವಪರ ಕಾಳಜಿ ನಮಗೆಲ್ಲ ಮಾದರಿಯಾಗಿದೆ. ಅವರು ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದರೂ, ಕೊನೆಗೂ ಗೆದ್ದದ್ದು ಅವರ ಶ್ರಮ ಎಂದು ಸ್ಮರಿಸಿದರು.

ಪಠ್ಯದಲ್ಲಿ ಕರುನಾಡ ಯಜಮಾನನ ಪಠ್ಯ ಸೇರಿಸಲು ಡಾ. ವಿಷ್ಣು ಸೇನಾ ಸಮಿತಿ ಮನವಿ ಮಾಡಿತು. ಇದಕ್ಕೆ ಸ್ಪಂದಿಸಿದ ಸಚಿವರು ಪಠ್ಯಪುಸ್ತಕ ಸಮಿತಿಗೆ ನಿಮ್ಮ ಮನವಿಯನ್ನು ಶಿಫಾರಸುಗೊಳಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಲೇಖಕ ಡಾ. ಶರಣು ಹುಲ್ಲೂರು, ವಿಷ್ಣು ಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ, ಎಬಿವಿಪಿ ಮುಖಂಡ ಗುರುನಾಥ ರಾಜಗೀರ ಹಾಜರಿದ್ದರು.

× Chat with us