ವಿದ್ಯಾರ್ಥಿ ಸಾವು ಪ್ರಕರಣ: ತನಿಖೆಗೆ ಆದೇಶಿಸಿದ ಶಿಕ್ಷಣ ಸಚಿವ

ಬೆಂಗಳೂರು: ತುಮಕೂರಿನ ಕರೀಕೆರೆ ಗ್ರಾಮದಲ್ಲಿ ಧ್ವಜ ಸ್ತಂಭ ನಿಲ್ಲಿಸುವಾಗ ವಿದ್ಯುತ್ ಸ್ಪರ್ಶದಿಂದ ವಿದ್ಯಾರ್ಥಿ ಮೃತಪಟ್ಟ ದುರ್ಘಟನೆ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಆದೇಶ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ಸಂಬಂಧ ತುಮಕೂರು ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆಯಲಾಗಿದೆ. ತನಿಖೆ ನಡೆಸಲು ತಿಳಿಸಲಾಗಿದೆ ಎಂದು ಹೇಳಿದ್ದಾರೆ.

ಈ ಸುದ್ದಿ ತಿಳಿದು ಆಘಾತವಾಯಿತು. ಚಂದನ್ ಎಂಬ ವಿದ್ಯಾರ್ಥಿ ಸಾವಿಗೀಡಾಗಿದ್ದಾರೆ. ಪವನ್ ಮತ್ತು ಶಶಾಂಕ್ ಎಂಬ ಬಾಲಕರಿಗೆ ಗಾಯಗಳಾಗಿವೆ. ಇದು ದುರದೃಷ್ಟಕರ ಎಂದು ಸಚಿವರು ತಿಳಿಸಿದ್ದಾರೆ.

ಮೃತ ವಿದ್ಯಾರ್ಥಿ ಕುಟುಂಬಕ್ಕೆ ಸಂತಾಪ ತಿಳಿಸಿರುವ ಅವರು, ಗಾಯಗೊಂಡ ಬಾಲಕರ ಚಿಕಿತ್ಸೆಗೆ ಬೇಕಾದ ಅಗತ್ಯ ನೆರವು ನೀಡಲಾಗುತ್ತದೆ. ಈ ಸಂಬಂಧ ಜಿಲ್ಲಾಧಿಕಾರಿ ಅವರಿಂದ ಮಾಹಿತಿ ಪಡೆಯಲಾಗಿದೆ ಎಂದು ನಾಗೇಶ್ ಹೇಳಿದ್ದಾರೆ.

× Chat with us