ಬೆಂಗಳೂರು : ಸದ್ಯ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ಕಾವೇರಿ ನೀರು ಹಂಚಿಕೆ ವಿಚಾರವಾಗಿ ಎದ್ದಿರುವ ಸಮಸ್ಯೆಗೆ ಮೇಕೆದಾಟು ಯೋಜನೆಯೊಂದೆ ಪರಿಹಾರ. ಈ ಬಗ್ಗೆ ನಾವು ಸುಪ್ರೀಂಕೋರ್ಟ್ ಗೆ ಮಾಹಿತಿ ನೀಡಿದ್ದೇವೆ ಎಂದು ನೀರಾವರಿ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಶುಕ್ರವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯವೇ ಕಾವೇರಿ ನಿರ್ವಹಣಾ ಪ್ರಾಧಿಕಾರ ರಚನೆ ಮಾಡಿದ್ದು, ಇದು ತಾಂತ್ರಿಕ ಸಮಿತಿಯಾಗಿದೆ. ಸದ್ಯ ಅವರು ತಾಂತ್ರಿಕ ಅಂಶಗಳ ಬಗ್ಗೆ ಗಮನಹರಿಸಬೇಕು. ಈ ಪರಿಸ್ಥಿತಿಯಲ್ಲಿ ಪ್ರಮುಖ ಪರಿಹಾರ ಎಂದರೆ ಅದು ಮೇಕೆದಾಟು ಯೋಜನೆ ಮಾತ್ರ ಎಂದರು.
ಮೇಕೆದಾಟು ಆಣೆಕಟ್ಟು ನಿರ್ಮಾಣವಾಗಿದ್ದರೆ ಇಂದು ಈ ಸಮಸ್ಯೆ ಹಾಗೂ ಪರಿಸ್ಥಿತಿಯೆ ಉದ್ಭವಿಸುತ್ತಿರಲಿಲ್ಲ. ಕಳೆದ ವರ್ಷ 400ಕ್ಕೂ ಹೆಚ್ಚು ಟಿಎಂಸಿ ನೀರು ವ್ಯರ್ಥವಾಗಿ ಸಮುದ್ರದ ಪಾಲಾಗಿದೆ. ಅದರಲ್ಲಿ ಸ್ವಲ್ಪ ಪ್ರಮಾಣದ ನೀರನ್ನು ಮೇಕೆದಾಟು ಆಣೆಕಟ್ಟು ಮೂಲಕ ಹಿಡಿದಿಟ್ಟಿದ್ದರೆ ಈ ಸಮಸ್ಯೆಯೆ ಎದುರಾಗುತ್ತಿರಲಿಲ್ಲ ಎಂದು ಶಿವಕುಮಾರ್ ಹೇಳಿದರು.
ಮೇಕೆದಾಟು ಆಣೆಕಟ್ಟು ನೀರನ್ನು ನಾವು ನೀರಾವರಿಗೆ ಬಳಸಲು ಸಾಧ್ಯವಿಲ್ಲ. ಕೇವಲ ಕುಡಿಯುವ ನೀರಿಗೆ ಬಳಸಬಹುದು. ಮೇಕೆದಾಟು ಇಂತಹ ಸಂಕಷ್ಟದ ಸಮಯದಲ್ಲಿ ಹೆಚ್ಚು ಸಹಾಯಕ್ಕೆ ಬರುತ್ತದೆ. ಈ ವಿಚಾರದ ಬಗ್ಗೆ ಸುಪ್ರೀಂಕೋರ್ಟ್ ಗಮನ ಹರಿಸಬೇಕಿದೆ. ನಾವು ನಮ್ಮ ಅರ್ಜಿಯಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದೇವೆ. ನಾವು ಈ ವಿಚಾರವನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತರುತ್ತೇವೆ ಎಂದು ಅವರು ಹೇಳಿದರು.
ನಮ್ಮ ರಾಜ್ಯದಲ್ಲಿ ಕೆಲವು ವಿರೋಧ ಇದ್ದರೂ ನಾವು ನ್ಯಾಯಾಲಯದ ಆದೇಶ ಗೌರವಿಸುತ್ತೇವೆ. ನಮ್ಮ ಸರಕಾರ ನ್ಯಾಯಾಲಯಕ್ಕೆ ಎಲ್ಲ ಮಾಹಿತಿ ನೀಡಿದ್ದು, ನಮ್ಮ ರಾಜ್ಯದ ರೈತರ ಹಿತ ಕಾಯಲು ಬದ್ಧವಿದ್ದೇವೆ. ತಮಿಳುನಾಡು ತನ್ನ ಪಾಲಿನ ನೀರನ್ನು ಯಾವ ಉದ್ದೇಶಕ್ಕಾಗಿ ಬೇಕಾದರೂ ಬಳಸಬಹುದು. ಅದನ್ನು ನಾವು ಪ್ರಶ್ನಿಸಲು ಸಾಧ್ಯವಿಲ್ಲ. ಆದರೆ ತಮಿಳುನಾಡು ಸಂಕಷ್ಟದ ಸಮಯದಲ್ಲಿ ಈ ನೀರನ್ನು ಎಚ್ಚರಿಕೆಯಿಂದ ಬಳಸಬಹುದಾಗಿತ್ತು. ನಾವು ನಮ್ಮ ರೈತರಿಗೆ ಬಿತ್ತನೆ ಮಾಡದಂತೆ ಸಲಹೆ ನೀಡಿರುವಂತೆ ಅವರು ಅವರ ರೈತರಿಗೆ ಸಲಹೆ ನೀಡಬಹುದಾಗಿತ್ತು ಎಂದು ಶಿವಕುಮಾರ್ ತಿಳಿಸಿದರು.
ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ರಾಜಕೀಯ ಉದ್ದೇಶದ ವಿರೋಧದ ಹೊರತಾಗಿ ರಾಜ್ಯದ ಯಾವುದೇ ರೈತರು ವಿರೋಧ ವ್ಯಕ್ತಪಡಿಸಿಲ್ಲ. ತಮಿಳುನಾಡಿಗೆ ನೀರು ಬಿಡಬೇಡಿ ಎಂದು ಹೇಳಲಾಗುತ್ತಿದೆಯೆ ಹೊರತು, ನಮಗೆ ನಷ್ಟವಾಗಿದೆ ಎಂದು ಯಾರೂ ಹೇಳುತ್ತಿಲ್ಲ. ಕಾರಣ ನಾವು ನಮ್ಮ ರೈತರಿಗೆ ಅಗತ್ಯ ಸಮಯದಲ್ಲಿ ನೀರು ಹರಿಸಿ, ಅವರ ನೆರವಿಗೆ ಧಾವಿಸಿದ್ದೇವೆ ಎಂದು ಅವರು ಹೇಳಿದರು.
ನಮ್ಮ ಜಿಲ್ಲಾ ಸಚಿವರು ರೈತರ ಜೊತೆ ಸಭೆ ಮಾಡಿ ಈ ಸಮಯದಲ್ಲಿ ಬಿತ್ತನೆ ಮಾಡಬೇಡಿ ಎಂದು ಮನವಿ ಮಾಡಿ, ಅರಿವು ಮೂಡಿಸಿದ್ದಾರೆ. ಇಂದು ಸುಪ್ರೀಂ ಕೋರ್ಟ್ ನೀರು ಬಿಡುಗಡೆ ವಿಚಾರದಲ್ಲಿ ಯಾವುದೆ ನಿರ್ಧಾರ ಕೈಗೊಂಡಿಲ್ಲ. ಈ ಸಮಸ್ಯೆಗೆ ಪರಿಹಾರ ಬೇಕಾದರೆ ಅದಕ್ಕೆ ಮೇಕೆದಾಟು ಯೋಜನೆಯೊಂದೇ ಪರಿಹಾರ ಎಂದು ಸುಪ್ರೀಂ ಕೋರ್ಟ್ ಹಾಗೂ ತಮಿಳುನಾಡಿಗೆ ಹೇಳಲು ಬಯಸುತ್ತೇನೆ ಎಂದು ಶಿವಕುಮಾರ್ ತಿಳಿಸಿದರು.
ಮಂಡ್ಯ: ಪಾರ್ಸೆಲ್ ಕೊಡುವ ನೆಪದಲ್ಲಿ ಬಂದು ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯದ ಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ. ರಮೇಶ್…
ಬೆಂಗಳೂರು: ನಿವೃತ್ತ ಸಾರಿಗೆ ನೌಕರರಿಗೆ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಗ್ರಾಚ್ಯುಟಿ ಹಣವನ್ನು ಬಿಡುಗಡೆ ಮಾಡಿದೆ. ಗ್ರಾಚ್ಯುಟಿ ಮತ್ತು ಗಳಿಕೆ…
ಬೆಂಗಳೂರು: ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವೇದಿಕೆಯನ್ನು ಸಿಎಂ ಸಿದ್ದರಾಮಯ್ಯ ದುರುಪಯೋಗಪಡಿಸಿಕೊಂಡಿದ್ದಾರೆ…
ಹೈದರಾಬಾದ್: ಡಿಸೆಂಬರ್.4ರಂದು ಸಂಧ್ಯಾ ಥಿಯೇಟರ್ ಬಳಿ ನಡೆದ ಕಾಲ್ತುಳಿತದಲ್ಲಿ ಮಹಿಳೆಯೋರ್ವರು ಮೃತಪಟ್ಟಿದ್ದು ದುರದೃಷ್ಟಕರ ಎಂದು ನಟ ಅಲ್ಲು ಅರ್ಜುನ್ ಬೇಸರ…
ಬೆಂಗಳೂರು: ಎರಡು ಕಾರು, ಎರಡು ಲಾರಿ ಹಾಗೂ ಶಾಲಾ ಬಸ್ ನಡುವಿನ ಸರಣಿ ಅಪಘಾತದಲ್ಲಿ ಒಂದೇ ಕುಟುಂಬದ ಆರು ಮಂದಿ…
ಬೆಂಗಳೂರು: ವಕ್ಫ್ ಮಂಡಳಿಯು ಹಿಂದೂ ಹಾಗೂ ರೈತರ ಆಸ್ತಿ ಕಬಳಿಕೆ ಮಾಡುತ್ತಿರುವ ಬಗ್ಗೆ ಸದನದಲ್ಲಿ ದಾಖಲೆ ಸಮೇತ ಮಾತನಾಡಿದ್ದು, ಈ…