ಸೆ.30 ರಂದು ಮೆಗಾ ಲೋಕ ಅದಾಲತ್!

ಮೈಸೂರು: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಸೆ.30 ರಂದು ರಾಜ್ಯಾದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ ‘ಮೆಗಾ ಲೋಕ್ ಅದಾಲತ್’ ಅನ್ನು ಆಯೋಜಿಸಲಾಗಿದ್ದು, ಮೈಸೂರು ಜಿಲ್ಲೆಯ 69 ನ್ಯಾಯಾಲಯಗಳಲ್ಲೂ ಲೋಕ್‌ ಅದಾಲತ್‌ ನಡೆಯಲಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಂ.ಎಲ್.ರಘುನಾಥ್ ತಿಳಿಸಿದರು.

ಮೈಸೂರಿನ  ಜಯನಗರದ ಬಳಿಯ ಮಳಲವಾಡಿಯಲ್ಲಿನ ನ್ಯಾಯಾಲಯದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳಲ್ಲಿ ಕಾನೂನಿನ ಪ್ರಕಾರ ರಾಜಿಯಾಗಬಹುದಾದ ಪ್ರಕರಣಗಳನ್ನು ಮತ್ತು ವಾಜ್ಯ ಪೂರ್ವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸುವ ಉದ್ದೇಶದಿಂದ ಮೆಗಾ ಲೋಕ್ ಅದಾಲತ್‌ನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಮೈಸೂರು ನಗರ ಮತ್ತು ತಾಲ್ಲೂಕುಗಳಲ್ಲಿನ ನ್ಯಾಯಾಲಯಗಳಲ್ಲಿ ಒಟ್ಟು 1,16,664 ಪ್ರಕರಣಗಳು ವಿಚಾರಣೆಗೆ ಬಾಕಿಯಿದ್ದು, ಅವುಗಳ ಪೈಕಿ 54,882 ಸಿವಿಲ್ ಪ್ರಕರಣಗಳು ಹಾಗೂ 61,762 ಕ್ರಿಮಿನಲ್ ಪ್ರಕರಣಗಳಿವೆ. ಸದರಿ ಪ್ರಕರಣಗಳ ಪೈಕಿ ರಾಜಿ ಆಗುವ ಸಾಧ್ಯತೆ ಇರುವ ಪ್ರಕರಣಗಳನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ. ಪ್ರಸ್ತುತ ಈ ಕೆಳಕಂಡಂತೆ ವರ್ಗವಾರು ಪ್ರಕರಣಗಳನ್ನು ರಾಜಿ ಇತ್ಯರ್ಥಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಮೋಟಾರು ವಾಹನ ಅಪಘಾತ ಪ್ರಕರಣಗಳು 2,733, ರಾಜಿಯಾಗಬಹುದಾದ ಕ್ರಿಮಿನಲ್ ಪ್ರಕರಣಗಳು 3,019, ಚೆಕ್ ಬೌನ್ಸ್ 21,038 ಪ್ರಕರಣಗಳಿದ್ದು, ಅವುಗಳ ಪೈಕಿ ಅಂದಾಜು 1,830, ನ್ಯಾಯಾಲಯಗಳಲ್ಲಿ ದಾಖಲಾಗದೇ ಇರುವಂತಹ ಪ್ರಕರಣಗಳನ್ನು ವಾಜ್ಯ ಪೂರ್ವ ಪ್ರಕರಣಗಳೆಂದು ಗುರುತಿಸಲಾಗಿರುವುದು 157 ಪ್ರಕರಣಗಳೂ ಸೇರಿದಂತೆ ಒಟ್ಟು 7,739 ಪ್ರಕರಣಗಳನ್ನು ರಾಜಿ ಇತ್ಯರ್ಥಕ್ಕಾಗಿ ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವರಾಜ ಭೂತೆ, ವಕೀಲರ ಸಂಘದ ಕಾರ್ಯದರ್ಶಿ ಶಿವಣ್ಣ ಉಪಸ್ಥಿತರಿದ್ದರು.

× Chat with us