ಚಾಮರಾಜನಗರ ಮೃತರ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ಕೊಡಿ: ಮರಿತಿಬ್ಬೇಗೌಡ

ಮೈಸೂರು: ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟ 24 ಮಂದಿಯ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಆಗ್ರಹಿಸಿದ್ದಾರೆ.

ಮೈಸೂರು ಜಿಲ್ಲಾಡಳಿತದಿಂದ ಆಮ್ಲಜನಕವು ಚಾಮರಾಜನಗರ ಜಿಲ್ಲೆಗೆ ಸರಬರಾಜಾಗುತ್ತಿತ್ತು. ಆದರೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಚಾಮರಾಜನಗರ ಜಿಲ್ಲೆಗೆ ಆಕ್ಸಿಜನ್ ಸರಬರಾಜು ಮಾಡಲು ನಿರಾಕರಿಸಿದರಿಂದ ಈ ಘಟನೆ ನಡೆದಿದೆ. ಕೂಡಲೇ ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.

ರೋಹಿಣಿ ಸಿಂಧೂರಿ ಅವರು ಚಾಮರಾಜನಗರಕ್ಕೆ ಆಕ್ಸಿಜನ್ ನೀಡಲು ನಿರಾಕರಿಸಿದ್ದಾರೆ ಎಂಬ ಸುದ್ದಿ ತಿಳಿಸಿದ ತಕ್ಷಣವೇ ರಾಜ್ಯದ ಕೋವಿಡ್ ನೋಡೆಲ್ ಅಧಿಕಾರಿ ನಿಶ್ಚಿತ್ ಮತ್ತು ಗುಂಜಾಲ್ ಕೃಷ್ಣ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮೈಸೂರು ಜಿಲ್ಲಾಧಿಕಾರಿ ಚಾಮರಾಜನಗರ ಜಿಲ್ಲೆಗೆ ಆಕ್ಸಿಜನ್ ಸರಬರಾಜು ಮಾಡಲು ಸಾಧ್ಯವಿಲ್ಲವೆಂದಿದ್ದಾರೆ ಎಂದು ತಿಳಿದು ಬಂದಿದೆ. ಬೆಳಿಗ್ಗೆ 11 ಗಂಟೆಯೊಳಗೆ ಆಕ್ಸಿಜನ್ ಚಾಮರಾಜನಗರ ಜಿಲ್ಲೆಗೆ ತಲುಪದೆ ಹೋದರೆ ಸೋಂಕಿತರಿಗೆ ಬಹಳ ತೊಂದರೆಯಾಗುತ್ತದೆ. ಹಾಗಾಗಿ ಮೈಸೂರು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿ, ಕೂಡಲೇ ಆಕ್ಸಿಜನ್ ಸರಬರಾಜು ಮಾಡಿಸಲು ಕ್ರಮ ವಹಿಸಬೇಕು ಎಂದು ವಿನಂತಿಸಿದ್ದೆ.

ಇದಕ್ಕೆ ಪ್ರತಿಕ್ರಿಯಿಸಿದ ಗುಂಜಾಲ್ ಕೃಷ್ಣ ಅವರು, ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆಕ್ಸಿಜನ್ ಸರಬರಾಜು ಮಾಡಲು ನಿರಾಕರಿಸಿರುವುದು, ನನ್ನ ಗಮನಕ್ಕೆ ಬಂದಿದೆ. ಕೂಡಲೇ ಸರಬರಾಜು ಮಾಡಲು ನಿರ್ದೇಶನ ನೀಡುವುದಾಗಿ ತಿಳಿಸಿದ್ದರು. ನಿಶ್ಚಿತ್ ಅವರು ಮೈಸೂರು ಜಿಲ್ಲಾಧಿಕಾರಿಗಳೊಂದಿಗೆ ಈ ಸಂಬಂಧ ಈಗಾಗಲೇ ನಾನು ವಾತನಾಡಿದ್ದೇನೆ. ಆದರೆ ನಮ್ಮ ನಿರ್ದೇಶನವನ್ನು ಅವರು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಆದ ಕಾರಣ, ಈಗ ಬದಲಿ ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತಿದ್ದೇವೆಂದು ತಿಳಿಸಿದ್ದರು.

ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ಕುಮಾರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದೆ. ಸಚಿವರು ಸಹ ಮೈಸೂರು ಜಿಲ್ಲಾಧಿಕಾರಿಗಳು ಸಹಕರಿಸದೆ ಇರುವುದರ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿ, ಕೂಡಲೇ ಬದಲಿ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದರು.

ಸಕಾಲದಲ್ಲಿ ಆಕ್ಸಿಜನ್ ಸರಬರಾಜು ಮಾಡಲು ಅಡ್ಡಿಪಡಿಸಿರುವ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬೇಜವಾಬ್ದಾರಿ ವರ್ತನೆ ಬಗ್ಗೆ ಕೂಡಲೇ ಮಾಹಿತಿ ಪಡೆದು, ಪರಿಶೀಲಿಸಿ, ಅವರನ್ನು ಅವಾನತುಗೊಳಿಸಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಮರಿತಿಬ್ಬೇಗೌಡ ಮನವಿ ಮಾಡಿದ್ದಾರೆ.

× Chat with us