ಬೆಂಗಳೂರು : ಬಿಜೆಪಿಯವರು ಮನುವಾದ ಮನುಸ್ಮೃತಿಯನ್ನು ಆಧರಿಸಿದ ಶಿಕ್ಷಣ ನೀಡಲು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದರು. ಆದರೆ ಮುಂದಿನ ವರ್ಷದಿಂದ ನಾವು ಅದನ್ನು ಬದಲಾವಣೆ ಮಾಡಿ ಸಂವಿಧಾನಬದ್ಧ ಶಿಕ್ಷಣ ನೀಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕಾಂಗ್ರೆಸ್‍ನ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಯಾವ ರಾಜ್ಯಗಳಲ್ಲೂ ನೂತನ ಶಿಕ್ಷಣ ನೀತಿ ಜಾರಿಯಾಗಿರಲಿಲ್ಲ. ಆದರೆ ರಾಜ್ಯದಲ್ಲಿ ಅದನ್ನು ಅನುಷ್ಠಾನಗೊಳಿಸಿದ್ದಾರೆ. ಈ ವರ್ಷ ತಡವಾಗಿದೆ. ಮುಂದಿನ ವರ್ಷ ಶಿಕ್ಷಣ ನೀತಿಯನ್ನು ಬದಲಾವಣೆ ಮಾಡಿ ಸಂವಿಧಾನಬದ್ಧ ಶಿಕ್ಷಣ ನೀಡಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.
ಬಿಜೆಪಿಯವರು ಸಂವಿಧಾನವನ್ನು ಮನುವಾದ ಮತ್ತು ಮನುಸ್ಮೃತಿಯ ಆಧಾರವಾಗಿಯೇ ರಚಿಸುವ ಪ್ರಯತ್ನ ಮಾಡಿದ್ದರು. ಡಾ.ಅಂಬೇಡ್ಕರ್ ಅವರು ವಿದೇಶದಲ್ಲಿ ಓದಿ ಕಾನೂನು ಪಂಡಿತರಾಗದೇ ಇದ್ದಿದ್ದರೆ ಇಷ್ಟು ಉತ್ತಮವಾದ ಸಂವಿಧಾನ ರಚನೆಯಾಗುತ್ತಿರಲಿಲ್ಲ. ಹಿಂದೆ ರಾಜರ ಆಡಳಿತದಲ್ಲಿ ಮನುವಾದವೇ ಜಾರಿಯಲ್ಲಿತ್ತು. ಅದರ ಪ್ರಕಾರ, ಮೇಲ್ವರ್ಗದವರು ಅತ್ಯಾಚಾರದಂತಹ ಅಪರಾಧ ಮಾಡಿದರೂ ಶಿಕ್ಷೆ ಇರುತ್ತಿರಲಿಲ್ಲ. ಕೆಳವರ್ಗದವರು ಅದೇ ಅಪರಾಧ ಮಾಡಿದ್ದರೆ ಕಠಿಣ ಶಿಕ್ಷೆ ಎದುರಿಸಬೇಕಿತ್ತು. ಸಂವಿಧಾನ ಇದನ್ನು ತೊಡೆದು ಹಾಕಿದೆ. ಸಂವಿಧಾನ ಉಳಿದರೆ ಅದು ಜನರನ್ನು ರಕ್ಷಿಸುತ್ತದೆ. ಹೀಗಾಗಿ ಸಂವಿಧಾನವನ್ನು ಕಾಪಾಡಿಕೊಳ್ಳುವುದು ಕಾಂಗ್ರೆಸಿಗರ ಕರ್ತವ್ಯ ಎಂದರು.
ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಕೋಮುವಾದವನ್ನ ಪ್ರಯೋಗಶೀಲವನ್ನಾಗಿ ಮಾಡಿತ್ತು. ಭ್ರಷ್ಟಾಚಾರ, ಅನಾಚಾರ, ಅನ್ಯಾಯ ಮಾಡಿತ್ತು. ಜಾತ್ಯಾತೀತ ತಳಹದಿಯನ್ನು ಅಲುಗಾಡಿಸಿತ್ತು. ಪ್ರಧಾನಿಯವರನ್ನು ಕರೆಸಿ ಭಾಷಣ ಮಾಡಿಸಿದರೆ ತಮ್ಮೆಲ್ಲಾ ತಪ್ಪುಗಳೂ ಮುಚ್ಚಿ ಹೋಗುತ್ತವೆ ಎಂದು ಬಿಜೆಪಿಯವರು ಭಾವಿಸಿದ್ದರು. ಆದರೆ ಅದು ಸಾಧ್ಯವಾಗಿಲ್ಲ ಎಂದು ವಾಗ್ದಳಿ ನಡೆಸಿದರು.
ಪ್ರಧಾನಿ ಚುನಾವಣಾ ಸಂದರ್ಭದಲ್ಲಿ 28 ಬಾರಿ ರಾಜ್ಯಕ್ಕೆ ಬಂದು ಪ್ರಚಾರ ಮಾಡಿದ್ದರು. ಅವರು ರೋಡ್ ಶೋ ಮಾಡಿದ ಕಡೆ, ಪ್ರವಾಸ ಮಾಡಿದ ಕಡೆ ಬಹುತೇಕ ಬಿಜೆಪಿ ಸೋತಿದೆ.ದೇಶದಲ್ಲಿ ಬೆಲೆ ಏರಿಕೆ ಹೆಚ್ಚಾಗಿದೆ. ನಿರುದ್ಯೋಗ ಮಿತಿ ಮೀರಿದೆ. ನೋಟು ಅಮಾನೀಕರಣದಿಂದ ಆರ್ಥಿಕ ವ್ಯವಸ್ಥೆಯನ್ನೇ ಹಾಳುಗೆಡವಲಾಗಿದೆ. ಅವೈಜ್ಞಾನಿಕ ಜಿಎಸ್‍ಟಿ ಪದ್ಧತಿಯಿಂದ ಜನಸಾಮಾನ್ಯರಿಗೆ ಹೊರೆಯಾಗಿದೆ ಎಂದು ದೂರಿದರು.
ಕರ್ನಾಟಕದಿಂದ ಕೇಂದ್ರಕ್ಕೆ 4 ಲಕ್ಷ ಕೋಟಿ ರೂ. ತೆರಿಗೆ ರೂಪದಲ್ಲಿ ಹಣ ರವಾನೆಯಾಗುತ್ತಿದೆ. ಆದರೆ ಅವರು ರಾಜ್ಯಕ್ಕೆ ಮರಳಿ ನೀಡಿರುವುದು ಕೇವಲ 50 ಸಾವಿರ ಕೋಟಿ ರೂ ಮಾತ್ರ. ಬಿಜೆಪಿ ಸರ್ಕಾರ ಶ್ರೀಮಂತರ ತೆರಿಗೆ ಹೊರೆಯನ್ನು ಕಡಿಮೆ ಮಾಡಿದೆ. ಬಡವರ ಮೇಲೆ ಹೊರೆ ಹೆಚ್ಚಿಸಿದೆ. ಕಾಂಗ್ರೆಸ್‍ನ ಪಂಚಖಾತ್ರಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ. ಆದರೆ ಇದರಿಂದ ಜನಸಾಮಾನ್ಯರ ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತದೆ. ಬೆಲೆ ಏರಿಕೆ, ತೆರಿಗೆ ಹೊರೆಯಿಂದ ಸಂಕಷ್ಟಕ್ಕೀಡಾದವರಿಗೆ ಪಂಚಖಾತ್ರಿಗಳು ವರದಾನವಾಗಿವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಹಿಂದಿನ ಸರ್ಕಾರದ ಅವಯಲ್ಲಿನ ಹಗರಣಗಳನ್ನು ತನಿಖೆಗೊಳಪಡಿಸುತ್ತಿದ್ದಂತೆ ಬಿಜೆಪಿಯವರಿಗೆ ನಡುಕ ಶುರುವಾಗಿದೆ. ಅದಕ್ಕಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ವರ್ಗಾವಣೆ ದಂಧೆ ಸೇರಿದಂತೆ ವಿವಿಧ ಟೀಕೆಗಳನ್ನು ಮಾಡುತ್ತಿದ್ದಾರೆ. ತನಿಖೆಯ ವರದಿ ಬರಲಿ, ಆಗ ಬಿಜೆಪಿಯವರ ಬೇಳೆಕಾಳು ಗೊತ್ತಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.
ಅಧಿಕಾರಕ್ಕೆ ಬಂದ ಎರಡೂವರೆ ತಿಂಗಳಲ್ಲೇ 36 ಸಾವಿರ ಕೋಟಿ ರೂ. ವೆಚ್ಚದ ಪಂಚಖಾತ್ರಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಗೃಹಲಕ್ಷ್ಮಿ ದೇಶದಲ್ಲೇ ಅತಿ ದೊಡ್ಡ ಯೋಜನೆ. ಅಕ್ಕಿ ನೀಡುವ ಅನ್ನಭಾಗ್ಯ ಬಿಜೆಪಿ ಕಾರ್ಯಕ್ರಮ ಎಂದು ಹೇಳುತ್ತಾರೆ. ಹಾಗಿದ್ದರೆ ಬಿಜೆಪಿ ಅಕಾರದಲ್ಲಿರುವ ಗುಜರಾತ್, ಮಧ್ಯಪ್ರದೇಶ, ಉತ್ತರಪ್ರದೇಶದಲ್ಲಿ ಏಕೆ ಜಾರಿಯಲ್ಲಿಲ್ಲ ಎಂದು ಪ್ರಶ್ನಿಸಿದರು.
ಬಿಜೆಪಿಯವರು ರಾಜ್ಯವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಳುಗೆಡವಿದ್ದಾರೆ. ಮಣಿಪುರದಲ್ಲಿನ ಹಿಂಸಾಚಾರಗಳ ಬಗ್ಗೆ ಪ್ರಧಾನಿ ಸಮರ್ಪಕ ಉತ್ತರ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೆ. ಅವಿಶ್ವಾಸ ನಿರ್ಣಯದ ವೇಳೆ ಉತ್ತರ ನೀಡದ ಮೋದಿ ರಾಜಕೀಯ ಭಾಷಣ ಮಾಡಿದರು. ಪುಣ್ಯಾತ್ಮ ಮೋದಿ ಸಂಸತ್‍ಗೆ ಹೋಗುವುದಿಲ್ಲ. ಪತ್ರಿಕಾಗೋಷ್ಠಿಯನ್ನೇ ನಡೆಸುವುದಿಲ್ಲ. ಆದರೂ ಮಾಧ್ಯಮದವರಿಗೆ ಮೋದಿ ಕಂಡರೆ ಪ್ರೀತಿ. ಬಿಜೆಪಿ ಪಾತಾಳಕ್ಕೆ ಹೋಗುತ್ತಿದೆ. ಕೆಲವು ಮಾಧ್ಯಮದವರು ಬಿಜೆಪಿಯನ್ನು ಹಿಡಿದು ಮೇಲೆತ್ತುವ ಪ್ರಯತ್ನ ಮಾಡುತ್ತಿದ್ದಾರೆ. ನಾವು ಈ ಬಗ್ಗೆ ಎಚ್ಚರಿಕೆಯಿಂದಿರಬೇಕೆಂದು ಹೇಳಿದರು.
ವಿಧಾನಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ವಿಶ್ರಾಂತಿ ಪಡೆಯುವಂತಾಗಬಾರದು. ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಗುರಿ ನಮ್ಮ ಮುಂದಿದೆ. ಆವರೆಗೂ ವಿಶ್ರಮಿಸದಂತೆ ಸಲಹೆ ನೀಡಿದರು.
ಬಿಜೆಪಿ ಕಳೆದ ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನಗಳಲ್ಲಿ ಗೆದ್ದಿತ್ತು. ಆದರೆ ಈ ಬಾರಿ ಸೋಲಿನ ಭಯದಿಂದ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗಿದೆ. ಕಾಂಗ್ರೆಸ್ ಗೆದ್ದು ಸ್ಪಷ್ಟವಾಗಿ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಸೋಲುವುದು ಶತಸಿದ್ಧ ಎಂದು ಸಿದ್ದರಾಮಯ್ಯ ಗುಡುಗಿದರು.
`ಹೊಸ ತಲೆಮಾರಿನ ಸಾಹಿತ್ಯ' ಕುರಿತ ವಿಚಾರಗೋಷ್ಠಿಯಲ್ಲಿ ವಿಮರ್ಶಕ ವಿಕ್ರಂ ವಿಸಾಜಿ ಅಭಿಮತ • ಜಿ.ತಂಗಂ ಗೋಪಿನಾಥಂ ಮಂಡ್ಯ: ಹೊಸ ತಲೆಮಾರಿನ…
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…