ಎಂಎಲ್‌ಸಿ ಟಿಕೆಟ್‌ಗೆ ಮಂಜೇಗೌಡರಿಂದ ಅರ್ಜಿ

ಮೈಸೂರು: ಕಾಂಗ್ರೆಸ್ ಮುಖಂಡ ಹಾಗೂ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಸಿ.ಎನ್.ಮಂಜೇಗೌಡ ಅವರು ಮೈಸೂರು- ಚಾಮರಾಜನಗರ ದ್ವಿಸದಸ್ಯತ್ವಕ್ಕೆ ನಡೆವ ಎಂಎಲ್‌ಸಿ ಚುನಾವಣೆಯಲ್ಲಿ ಟಿಕೆಟ್ ನೀಡುವಂತೆ ಸೋಮವಾರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಮೂಲಕ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದರು.

ಅರ್ಜಿ ಸ್ವೀಕರಿಸಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್ ಅರ್ಜಿಯನ್ನು ಕೆಪಿಸಿಸಿ ಕಚೇರಿಗೆ ಕಳುಹಿಸಿಕೊಡುವುದಾಗಿ ಹೇಳಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಎನ್.ಮಂಜೇಗೌಡ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಎರಡೂ ಕ್ಷೇತ್ರಗಳ ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಸಂಸ್ಥೆಗಳ ಮುಖಂಡರ ಬೆಂಬಲವಿದೆ. ಕಾಂಗ್ರೆಸ್ ಸಿದ್ಧಾಂತಗಳಿಗೆ ನಾನು ಬದ್ಧನಾಗಿದ್ದೇನೆ. ಕಳೆದ ೩೦ ವರ್ಷಗಳಿಂದ ಕಾಂಗ್ರೆಸ್‌ಪಕ್ಷದಲ್ಲಿ ಸೇವೆ ಮಾಡಿದ್ದೇನೆ. ಆದರೆ, ಈ ವರೆಗೆ ದೊಡ್ಡಮಟ್ಟದ ಸ್ಥಾನಮಾನ ಸಿಕ್ಕಿಲ್ಲ. ಹಾಗಾಗಿ ಈ ಬಾರಿ ಪಕ್ಷ ನನ್ನನ್ನು ಗುರುತಿಸಿ, ಸ್ಥಾನಮಾನ ನೀಡಬೇಕು ಎಂದು ಮನವಿ ಮಾಡಿದರು.

ಗ್ರಾಮ ಪಂಚಾಯಿತಿಯಿಂದ ನನ್ನ ರಾಜಕೀಯ ಜೀವನ ಪ್ರಾರಂಭವಾಯಿತು. ನಂತರ ತಾಪಂ ಸದಸ್ಯನಾಗಿ ಕೆಲಸ ಮಾಡಿದ ಅನುಭವವಿದೆ. ಹಾಗಾಗಿ ಪಂಚಾಯಿತಿಗಳ ಸಮಸ್ಯೆ ಏನೆಂಬುದನ್ನು ಅರಿತಿದ್ದೇನೆ. ಹಾಗಾಗಿ ಎಂಎಲ್‌ಸಿ ಸ್ಥಾನಕ್ಕೆ ಟಿಕೆಟ್ ನೀಡುವಂತೆ ಅರ್ಜಿ ಸಲ್ಲಿಸಿದ್ದೇನೆ ಎಂದುಹೇಳಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಯಪುರ, ಹಾರೋಹಳ್ಳಿ, ಶ್ರೀರಾಂಪುರ ಪಂಚಾಯಿತಿಗಳ ಜವಾಬ್ದಾರಿ ವಹಿಸಿದಾಗ, ಆ ವ್ಯಾಪ್ತಿಯಲ್ಲಿ ಹೆಚ್ಚಿನ ಮತಗಳು ಬರುವಂತೆ ನೋಡಿಕೊಂಡಿದ್ದೇನೆ. ಮುಖ್ಯವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಬೆಂಬಲವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

× Chat with us