ಮಂಡ್ಯ-ಮೈಸೂರು ಹೈವೇ ಮಾಡೋದ್ರಿಂದ ಸ್ಥಳೀಯರಿಗೆ ತೊಂದರೆ: ಸುಮಲತಾ

ಮದ್ದೂರು: ಮಂಡ್ಯ-ಮೈಸೂರು ಹೈವೇ ಮಾಡುವುದರಿಂದ ಸ್ಥಳೀಯರಿಗೆ ತೊಂದರೆ ಆಗುತ್ತದೆ ಎಂದು ಸಂಸದೆ ಸುಮಲತಾ ಹೇಳಿದರು.

ತಾಲ್ಲೂಕಿನ ಕೆ.ಕೋಡಿಹಳ್ಳಿ ಗ್ರಾಮದಲ್ಲಿ ಬುಧವಾರ ಮಾತನಾಡಿದ ಅವರು, ಬೆಂಗಳೂರು-ಮೈಸೂರು ಹೆದ್ದಾರಿ 2 ನಗರಗಳಿಗೆ ಮಾತ್ರ ಓಡಾಡುವ ರಸ್ತೆಯಲ್ಲ. ಮಂಡ್ಯದಲ್ಲಿ 58 ಕಿ.ಮೀ. ಹೆದ್ದಾರಿ ಇದೆ. ಇಲ್ಲಿನ ರೈತರು ತಮ್ಮ ತಮ್ಮ ಜಮೀನು ತ್ಯಾಗ ಮಾಡಿದ್ದಾರೆ. ರೈತರಿಗೆ ಸಮಸ್ಯೆ ಕೊಟ್ಟು ಈ ಯೋಜನೆ ಮುಗಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಸರ್ವಿಸ್ ರೋಡ್ ಇಲ್ಲ, ಆಕ್ಸಸ್ ಪಾಯಿಂಟ್ ಸರಿಯಿಲ್ಲ. ಹೀಗಾಗಿ, ನಾನು ಕಾಮಗಾರಿ ವೈಜ್ಞಾನಿಕವಾಗಿಲ್ಲ‌ ಎಂದಿದ್ದೆ. ಪೇಪರ್‌ನಲ್ಲಿ ಎಲ್ಲ ಸರಿಯಿದೆ ಎಂದು ತೋರಿಸುವುದಲ್ಲ, ಗ್ರೌಂಡ್ ರಿಯಾಲಿಟಿ ನೋಡಬೇಕು. ಜನಕ್ಕೆ ಯಾವ ರೀತಿ ಆಗುತ್ತಿದೆ ಎಂಬುದನ್ನು ತಿಳಿಯಬೇಕು. ಅರ್ಧ ಕಿ.ಮೀ. ಹೋಗಲು 10 ಕಿ.ಮೀ. ಬಳಸಿ ಬರಬೇಕು ಎಂದರೆ ಜನಕ್ಕೆ ತೊಂದರೆ ಆಗುತ್ತದೆ. ಇದನ್ನೆಲ್ಲಾ ಲೆಕ್ಕಿಸದೆ ನಾವು ಯೋಜನೆ ಮುಗಿಸಬೇಕು ಎನ್ನುವುದು ಸರಿಯಲ್ಲ ಎಂದು ವಿರೋಧ ವ್ಯಕ್ತಪಡಿಸಿದರು.

ನಿಯಮಗಳಿರುವುದು ಜನಕ್ಕೆ ಉಪಯೋಗ ಆಗಲು. 15 ದಿನದ ಮಟ್ಟಿಗೆ ಸಮಯ ಕೇಳಿದ್ದಾರೆ, ಕಾದು ನೋಡುತ್ತೇನೆ. ಆನಂತರ ದೆಹಲಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಭೇಟಿ ಮಾಡುತ್ತೇನೆ ಎಂದರು.

× Chat with us