ಬಾಲಕಿ ಅಪಹರಿಸಿ ವಿವಾಹವಾಗಿದ್ದರೂ ಕೇಸ್‌ ದಾಖಲಿಸದ ಪೊಲೀಸರು: ಮರು ತನಿಖೆಗೆ ಆದೇಶ

(ಸಾಂದರ್ಭಿಕ ಚಿತ್ರ)

ಪಾಂಡವಪುರ: ತಾಲ್ಲೂಕಿನ ಗ್ರಾಮವೊಂದರ ಮಹಿಳೆ ತಮ್ಮ ಮಗಳನ್ನು ಅರಳಕುಪ್ಪೆ ಗ್ರಾಮದ ಕಿಶೋರ್ ಎಂಬ ಪುಂಡುಪೋಕರಿಯೊಬ್ಬ ಅಪಹರಿಸಿ ಬಾಲ್ಯವಿವಾಹವಾಗಿ ಲೈಂಗಿಕವಾಗಿ ಶೋಷಿಸಿದ್ದರೂ ಶ್ರೀರಂಗಪಟ್ಟಣ ಪೋಲಿಸರು ಸರಿಯಾಗಿ ದೂರು ದಾಖಲಿಸದೆ ಆರೋಪಿ ಸುಲಭವಾಗಿ ಜಾಮೀನು ಪಡೆಯಲು ಸಹಕರಿಸದ್ದಾರೆಂದು, ಪ್ರಕರಣದಲ್ಲಿ ‘ಬಿ’ ರಿಪೋರ್ಟ್ ಸಲ್ಲಿಸಲು ಯತ್ನಿಸುತ್ತಿದ್ದಾರೆಂದೂ, ಪ್ರಕರಣದ ಮರು ತನಿಖೆಗೆ ಆದೇಶಿಸಬೇಕೆಂದೂ ಮಂಡ್ಯದ ಶೀಘ್ರ ಗತಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

ಬಾಲಕಿಯ ತಾಯಿ ಸುವರ್ಣ ಪರವಾಗಿ ಅಖಿಲ ಭಾರತ ವಕೀಲರ ಒಕ್ಕೂಟದ ಅಧ್ಯಕ್ಷ ಬಿ.ಟಿ.ವಿಶ್ವನಾಥ್ ವಕಾಲತ್ತು ವಹಿಸಿ ಪ್ರಕರಣದ ಮರು ತನಿಖೆ ಮತ್ತು ಈ ಅಪರಾಧ ಕೃತ್ಯ ಬೆಂಬಲಿಸಿದ ಇತರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲು ವಾದ ಮಂಡಿಸಿದ್ದರು. ಶೀಘ್ರಗತಿ ನ್ಯಾಯಾಲಯದ ನ್ಯಾಯಾಧೀಶೆ ಈಗ ಪ್ರಕರಣದ ಮರು ತನಿಖೆಗೆ ಆದೇಶಿಸಿದ್ದಾರೆ.

ಈ ಮೊದಲು ಪಾಂಡವಪುರದ ನ್ಯಾಯಾಲಯವೊಂದು ಬಾಲಕಿಯನ್ನು ಆರೋಪಿ ಬಾಲಕನ ತಂದೆಯ ವಶಕ್ಕೆ ನೀಡಲು ಆದೇಶಿಸಿತ್ತು. ಆ ಆದೇಶವನ್ನು ಮಂಡ್ಯದ ಜಿಲ್ಲಾ ನ್ಯಾಯಾಧೀಶೆ ರಾಜೇಶ್ವರಿ ಹೆಗಡೆ ರದ್ದುಗೊಳಿಸಿದ್ದರು. ಬಾಲಕಿಯನ್ನು ಈಗ ಮೈಸೂರಿನ ಬಾಲಕಿಯರ ಮಂದಿರಕ್ಕೆ ಸಿಡಡ್ಲ್ಯುಸಿ ಮಂಡ್ಯ ವರ್ಗಾಯಿಸಿದೆ. ಶೀಘ್ರಗತಿ ನ್ಯಾಯಾಲಯ ಉಳಿದ ಆರೋಪಿಗಳಾದ ಅರಳಕುಪ್ಪೆ ಬಸವರಾಜು , ಮೀನಾಕ್ಷಿ, ಪ್ರಕಾಶ್, ಮಹೇಂದ್ರ, ರವೀಶ, ಕಾವ್ಯ, ಗೀತ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲು ಆದೇಶಿಸಿದೆ. ಬಾಲ್ಯ ವಿವಾಹದಲ್ಲಿ ಮಂಡ್ಯ ಜಿಲ್ಲೆ ಮುಂಚೂಣಿಯಲ್ಲಿದೆ ಸಂಬಂಧಿತ ಇಲಾಖೆಗಳನ್ನು ಮತ್ತಷ್ಟು ಸಂವೇದನಾ ಶೀಲ ಗೊಳಿಸುವ ಯತ್ನ ಆಗಬೇಕಾದ ತುರ್ತಿದೆ ಎಂದು ಬಿ.ಟಿ.ವಿಶ್ವನಾಥ್ ವಾದಿಸಿದ್ದರು.

× Chat with us