ಬುದ್ದಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರ: ಅಪರಾಧಿಗೆ 20 ವರ್ಷ ಶಿಕ್ಷೆ, 2 ಲಕ್ಷ ದಂಡ

ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲ್ಲೂಕಿನ ಗ್ರಾಮವೊಂದರಲ್ಲಿ ಅಂಗವಿಕಲ ಹಾಗೂ ಬುದ್ದಿಮಾಂದ್ಯವುಳ್ಳ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ 20 ವರ್ಷ ಶಿಕ್ಷೆ, 2 ಲಕ್ಷ ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸದಾಶಿವ ಎಸ್. ಸುಲ್ತಾನ್‌ಪುರಿ ತೀರ್ಪು ನೀಡಿದ್ದಾರೆ.

26 ವರ್ಷದ ರವಿ ಅಲಿಯಾಸ್ ರವಿಕುಮಾರ್ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತ 2018ರ ಆಗಸ್ಟ್ 15ರಂದು ಸಂಜೆ ಶಾಲೆಯಲ್ಲಿ ಆಟವಾಡುತ್ತಿದ್ದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ. ಈ ಬಗ್ಗೆ ಯಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿ 376(2) (ಎಲ್) 376 (ಎಬಿ) ಐಪಿಸಿ ಹಾಗೂ ಪೋಕ್ಸೊ ಕಾಯ್ದೆ 4(2) 5(ಜೆ) 1 ಹಾಗೂ 5 (ಕೆ) (ಎಂ) ಮತ್ತು 6ರಡಿಯಲ್ಲಿ ಕೃತ್ಯವೆಸಗಿರುವುದು ಸಾಬೀತಾದ ಕಾರಣ ಅಪರಾಧಿಗೆ 20 ವರ್ಷ ಶಿಕ್ಷೆ 2 ಲಕ್ಷ ರೂ. ದಂಡ ಹಾಗೂ ದಂಡ ತೆರಲು ತಪ್ಪಿದ್ದಲ್ಲಿ ಒಂದು ವರ್ಷ ಕಠಿಣ ಶಿಕ್ಷೆ ವಿಧಿಸಿ ನ್ಯಾಯಾಲಯವು ತೀರ್ಪು ನೀಡಿದೆ.

ಬಾಲಕಿಯ ಪುನಶ್ಚೇತನಕ್ಕಾಗಿ ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ಹಾಗೂ ವಿದ್ಯಾಭ್ಯಾಸಕ್ಕೆ ಬೇಕಾಗುವ ಎಲ್ಲ ಸೌಲಭ್ಯಗಳನ್ನು ಸರ್ಕಾರ ಒದಗಿಸುವಂತೆ ನಿರ್ದೇಶಿಸಿ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಪರಿಹಾರವಾಗಿ 2 ಲಕ್ಷದ 50 ಸಾವಿರ ರೂ. ನೀಡುವಂತೆ ನ್ಯಾಯಾಲಯವು ಆದೇಶಿಸಿದೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಕೆ.ಯೋಗೇಶ್ ಅವರು ವಾದ ಮಂಡಿಸಿದ್ದರು.

× Chat with us