ಕುಡಿದ ಮತ್ತಿನಲ್ಲಿ ಹಿಟ್ಟಿನ ದೊಣ್ಣೆಯಿಂದ ಹೊಡೆದು ಪತ್ನಿ ಕೊಂದ ಪತಿ!

ಸರಗೂರು: ಪತ್ನಿಯ ಮೇಲೆ ಅನುಮಾನಗೊಂಡು ಪತಿಯೇ ಕುಡಿದ ಮತ್ತಿನಲ್ಲಿ ದೊಣ್ಣೆಯಿಂದ ಹೊಡೆದು ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ನೆಮ್ಮನಹಳ್ಳಿ ಹಾಡಿಯಲ್ಲಿ ನಡೆದಿದೆ.

ತಾಲ್ಲೂಕಿನ ನೆಮ್ಮನಹಳ್ಳಿ ಹಾಡಿಯ ಕಾಳಮ್ಮ (33) ಹತ್ಯೆಯಾದ ಮಹಿಳೆ. ಕಾಳಮ್ಮ ಅವರ ಪತಿ ಕಾಳಸ್ವಾಮಿ ಪ್ರತಿದಿನ ಕುಡಿದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದದ್ದಲ್ಲದೆ ಹೆಂಡತಿಗೆ ಹೊಡೆಯುತ್ತಿದ್ದ ಎನ್ನಲಾಗಿದೆ. ತಡರಾತ್ರಿಯೂ ಹೆಂಡತಿಯೊಂಡನೆ ಕುಡಿದ ಮತ್ತಿನಲ್ಲಿ ಜಗಳ ತೆಗೆದು ಹೊಡೆದಿದ್ದ. ಮುಂಜಾನೆ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ತನ್ನ ಹೆಂಡತಿ ಸತ್ತು ಹೋಗಿದ್ದಾಳೆ ಎಂದು ಗ್ರಾಮದಲ್ಲಿ ಹೇಳಿಕೊಂಡು ಓಡಾಡಿದ್ದು, ವಿಚಾರ ತಿಳಿದ ಕೆಲ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ನೋಡಿದಾಗ ಕಾಳಮ್ಮ ಕೊಲೆಯಾಗಿರುವ ವಿಚಾರ ತಿಳಿದಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಸರಗೂರು ಪೊಲೀಸ್ ಠಾಣೆಯ ಸಿಬ್ಬಂದಿ ಪರಿಶೀಲನೆ ನಡೆಸಿ ಕಾಳಸ್ವಾಮಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು, ಸರಗೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

× Chat with us