ಮೈಸೂರು: ಬಾಲ್ಯದಲ್ಲೇ ಪ್ರೇಮ… ಮನೆಯವರ ವಿರೋಧ, ಕಾನೂನು ಸಂಘರ್ಷ ದಾಟಿ ಒಂದಾದ ಜೋಡಿ

ಮೈಸೂರು: ಹದಿಹರೆಯದಲ್ಲೇ ಪ್ರೇಮವಾಗಿ ಮನೆಯವರ ವಿರೋಧ ಹಾಗೂ ಕಾನೂನು ಸಂಘರ್ಷಕ್ಕೊಳಗಾಗಿ ಕೊನೆಗೂ ತಮ್ಮಿಷ್ಟದಂತೆಯೇ ಪ್ರೇಮಿಗಳಿಬ್ಬರು ಸರಳ ವಿವಾಹವಾಗುವಲ್ಲಿ ಯಶಸ್ವಿಯಾಗಿದ್ದಾರೆ.

ಎಚ್‌.ಡಿ.ಕೋಟೆ ತಾಲ್ಲೂಕಿನ ಕೋಳಗಾಲ ಗ್ರಾಮದ ರವಿ ಹಾಗೂ ಎಸ್‌.ದಿವ್ಯಾ ಇಬ್ಬರೂ ಮಾನವ ಮಂಟಪ ನೇತೃತ್ವದಲ್ಲಿ ಗುರುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಪರಸ್ಪರ ಪ್ರೀತಿಸಿದ್ದ ಇವರು ಶ್ಯಾಗಲೆ ಶಿವರುದ್ರಮ್ಮ ಟ್ರಸ್ಟ್‌ನಲ್ಲಿ ಪೋಷಕರು, ಬಂಧುಗಳ ಸಮ್ಮುಖದಲ್ಲಿ ಸರಳ ವಿವಾಹವಾದರು.

ʻನಿಜಕ್ಕೂ ಇದೊಂದು ಅಪರೂಪ ಹಾಗೂ ವಿಶೇಷ ವಿವಾಹʼ ಎಂದು ಬದುಕು ಟ್ರಸ್ಟ್‌ನ ನಿರ್ದೇಶಕ ಈ.ಧನಂಜಯ ಅವರು ಅಭಿಪ್ರಾಯಪಟ್ಟಿದ್ದಾರೆ.

ದಿವ್ಯಾ ಹದಿಹರೆಯದ ವಯಸ್ಸಿನಲ್ಲೇ ಒಂದೇ ಊರಿನ ರವಿಯನ್ನು ಪ್ರೀತಿಸಿದ್ದರು. ಅವರ ವಿವಾಹಕ್ಕೆ ಕುಟುಂಬದವರಷ್ಟೇ ಅಲ್ಲ ಕಾನೂನು ಚೌಕಟ್ಟಿನಲ್ಲೂ ಅಡ್ಡಿಯಿತ್ತು. ಪರಿಣಾಮವಾಗಿ ದಿವ್ಯಾ ತನ್ನ ಪೋಷಕರಿಂದ ತಿರಸ್ಕಾರಕ್ಕೆ ಒಳಗಾಗಿ ಬಾಲಮಂದಿರಕ್ಕೆ ಸೇರಿಬೇಕಾಯಿತು. ನಂತರ ಆಕೆಯ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಿರಲೆಂದು ಶಾಲೆಗೆ ಸೇರಿಸಲಾಯಿತು. ನಂತರ ಕೌಶಲ ತರಬೇತಿಗಾಗಿ ಬೆಂಗಳೂರಿನ ʻಅಪ್ಸ ಸುರಕ್ಷಾʼಗೆ ಸೇರಿಸಲಾಯಿತು. ಹುಡುಗಿ ದ್ವಿತೀಯ ಪಿಯು ಮುಗಿಸಿದ್ದಾಳೆ.

19ನೇ ವಯಸ್ಸಿನಲ್ಲಿ ತಾನು ಪ್ರೀತಿಸಿದ ಹುಡುಗನೊಂದಿಗೆ ವಿವಾಹವಾಗಿದ್ದಾಳೆ. ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದ್ದ ಪೋಷಕರು, ನಂತರದಲ್ಲಿ ಇವರಿಬ್ಬರ ಮದುವೆಗೆ ಒಪ್ಪಿಗೆ ಸೂಚಿಸಿ ನವಜೋಡಿಯನ್ನು ಆಶೀರ್ವದಿಸಿದ್ದಾರೆ ಎಂದು ಧನಂಜಯ ಸಂತಸ ವ್ಯಕ್ತಪಡಿಸಿದ್ದಾರೆ.

× Chat with us