ಬಡಾವಣೆ ಅಭಿವೃದ್ಧಿ ಯೋಜನೆ, ಜಾಗೃತಿ ದಳಕ್ಕೆ ನಿರ್ಣಯ: ಒಡಂಬಡಿಕೆಯಾದ 18 ತಿಂಗಳೊಳಗೆ ಪೂರ್ಣ

ಮೈಸೂರು: ಬಡಾವಣೆ ಅಭಿವೃದ್ಧಿ ಯೋಜನೆ ಮತ್ತು ಪ್ರಾಧಿಕಾರದಲ್ಲಿ ಜಾಗೃತಿ ದಳ ರಚಿಸುವ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಯೋಜನೆಗಳನ್ನು ಸಂಬಂಧಪಟ್ಟ ಭೂ ಮಾಲೀಕರೊಂದಿಗೆ ಒಡಂಬಡಿಕೆ ಮಾಡಿಕೊಂಡ 18 ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್‌ ತಿಳಿಸಿದರು.

ನವೆಂಬರ್ 6ರಂದು ನಡೆದ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಸಭೆಯಲ್ಲಿ ಪ್ರಮುಖ ವಿಷಯಗಳಲ್ಲಿ ಒಂದಾದ ಮುಡಾ ಮತ್ತು ಭೂ ಮಾಲೀಕರ ಜಂಟಿ ಸಹಭಾಗಿತ್ವದಲ್ಲಿ ಬಡಾವಣೆ ಅಭಿವೃದ್ಧಿ ಯೋಜನೆ ಮತ್ತು ಪ್ರಾಧಿಕಾರದಲ್ಲಿ ಜಾಗೃತ ದಳ ರಚಿಸುವ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಜಂಟಿ ಸಹಭಾಗಿತ್ವದಡಿ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಯೋಜನೆಗಳನ್ನು ಸಂಬಂಧಪಟ್ಡ ಎಲ್ಲ ಭೂ ಮಾಲೀಕರೊಂದಿಗೆ ಒಡಂಬಡಿಕೆ ಮಾಡಿಕೊಂಡ 18 ತಿಂಗಳೊಳಗೆ ಪೂರ್ಣಗೊಳಿಸಲಾಗುವುದು. ಪರಸ್ಪರ ಒಪ್ಪಿಗೆ ಪತ್ರ ನೀಡಿ ಒಪ್ಪಂದದ ಕರಾರಿಗೆ ಒಳಪಡುವ ಭೂ ಮಾಲೀಕರಿಗೆ ಮುಂಗಡವಾಗಿ 10 ಲಕ್ಷ ರೂಪಾಯಿ ನೀಡಲಾಗುವುದು ಎಂದರು.

ಜಂಟಿ ಸಹಭಾಗಿತ್ವದಡಿ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಯೋಜನೆಯ ಪ್ರಕಾರ ಲಭ್ಯವಾಗುವ ವಸತಿ ವಲಯದ ಶೇಕಡ 50-50ರ ಅನುಪಾತದಡಿ ಪ್ರತಿ ಎಕರೆಗೆ 30×40 ಚದರ ಅಡಿ ಅಳತೆಯ ಅಂದಾಜು 9 ನಿವೇಶನಗಳನ್ನು ನೀಡಲಾಗುವುದು. ಭೂ ಮಾಲೀಕರಿಗೆ ಮೂಲೆ ಅಥವಾ ವಾಣಿಜ್ಯ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದಿಲ್ಲ ಎಂದು ಹೇಳಿದರು.

× Chat with us