ಮಂಡ್ಯ: ಲ್ಯಾಕ್ಟೋಮೀಟರ್‌ನಲ್ಲಿ ವ್ಯತ್ಯಾಸ ಮಾಡೋ ದಂಧೆ ಬಯಲಿಗೆ!

ನಾಗಮಂಗಲ: ತಾಲ್ಲೂಕಿನ ಕರಡಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಬಿಎಂಸಿ ಕೇಂದ್ರದ ಹಾಲನ್ನು ಕಳೆದೊಂದು ವಾರದಿಂದ ಕಳಪೆಗುಣಮಟ್ಟದ ಹಾಲು ಎಂದು ತಿರಸ್ಕರಿಸುತ್ತಿರುವುದನ್ನು ಖಂಡಿಸಿ ಹಾಲಿನ ವಾಹನ ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಈ ಮೂಲಕ ಮನ್‌ಮುಲ್‌ನಲ್ಲಿ ಹಾಲಿಗೆ ನೀರು ಮಿಶ್ರಿತ ಹಗರಣ ಬಯಲಾಗಿ ತನಿಖೆ ಹಂತದಲ್ಲಿರುವಾಗಲೇ ಹಾಲಿನ ಗುಣಮಟ್ಟ ಪರೀಕ್ಷಿಸುವ ಲ್ಯಾಕ್ಟೋಮೀಟರ್‌ನಲ್ಲಿ ವ್ಯತ್ಯಾಸ ಮಾಡುವ ದಂಧೆ ಬೆಳಕಿಗೆ ಬಂದಿದೆ.

ಪ್ರತಿನಿತ್ಯ ಕನಿಷ್ಠ ೩ ಸಾವಿರಕ್ಕೂ ಅಧಿಕ ಲೀಟರ್ ಹಾಲು ಕರಡಹಳ್ಳಿ ಗ್ರಾಮದ ಬಿಎಂಸಿ ಕೇಂದ್ರದಿಂದ ಮಂಡ್ಯ ಹಾಲು ಒಕ್ಕೂಟಕ್ಕೆ ಪೂರೈಕೆಯಾಗುತ್ತಿದ್ದು, ಟ್ಯಾಂಕರ್‌ಗೆ ಹಾಲು ತುಂಬಿಸಿಕೊಳ್ಳುವ ಸಮಯದಲ್ಲಿ ಗುಣಮಟ್ಟ ಪರಿಶೀಲಿಸುವ ಲಾರಿ ಸಿಬ್ಬಂದಿ ತಮ್ಮ ಬಳಿಯಿರುವ ಲ್ಯಾಕ್ಟೋಮೀಟರ್‌ನಲ್ಲಿ ಪರೀಕ್ಷಿಸಿ ಇದು ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಹಾಲನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಇದರಿಂದ ಹೈನುಗಾರಿಕೆಯನ್ನೇ ಅವಲಂಬಿಸಿಕೊಂಡಿರುವ ರೈತರಿಗೆ ಹಾಲಿನ ದರ ಕಡಿಮೆ ಮಾಡುವ ಜೊತೆಗೆ ಸರ್ಕಾರದಿಂದ ಸಿಗುವ ಲೀಟರ್‌ಗೆ ೫ ರೂ. ಪ್ರೋತ್ಸಾಹಧನವೂ ಸಿಗುವುದಿಲ್ಲ. ಹಾಗಾಗಿ ಉತ್ಪಾದಕರಾದ ನಮಗೆ ನಷ್ಟವಾಗುತ್ತಿದೆ ಎಂದು ಆಗ್ರಹಿಸಿದ ರೈತರು, ಹಾಲಿನ ಟ್ಯಾಂಕರ್ ತಡೆದು ಸಂಬಂಧಿಸಿದ ಅಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸಬೇಕೆಂದು ಪಟ್ಟುಹಿಡಿದರು.

ಕರಡಹಳ್ಳಿ ಬಿಎಂಸಿ ಕೇಂದ್ರದವರು ಜಿಲ್ಲಾ ಹಾಲು ಒಕ್ಕೂಟದ ನಾಗಮಂಗಲ ಉಪ ಕೇಂದ್ರದಲ್ಲಿಯೇ ಖರೀದಿಸಿರುವ ಲ್ಯಾಕ್ಟೋಮೀಟರ್‌ನಲ್ಲಿ ಹಾಲಿನ ಗುಣಮಟ್ಟ ೨೮.೫ ಡಿಗ್ರಿ ತೋರಿಸಿದರೆ, ಲಾರಿ ಚಾಲಕನ ಬಳಿಯಿರುವ ಲ್ಯಾಕ್ಟೋಮೀಟರ್‌ನಲ್ಲಿ ಹಾಲಿನ ಗುಣಮಟ್ಟ ೨೭ ಡಿಗ್ರಿ ಬರುತ್ತಿದೆ. ಇದಕ್ಕೆ ಹೊಣೆ ಯಾರು? ಈ ದಂಧೆಯ ಹಿಂದೆ ಯಾರ ಕೈವಾಡವಿದೆ. ಇದೊಂದು ದೊಡ್ಡ ಜಾಲವೇ ಇರಬಹುದೆಂದು ಶಂಕೆ ವ್ಯಕ್ತಪಡಿಸಿದ ರೈತರು, ಅಧಿಕಾರಿಗಳು ಸ್ಥಳಕ್ಕೆ ಬಂದು ಎರಡೂ ಲ್ಯಾಕ್ಟೋಮೀಟರ್‌ನ ದೋಷ ಏನೆಂದು ತಿಳಿಸಬೇಕು. ಅಲ್ಲದೆ ಇದಕ್ಕೂ ಮುನ್ನ ಟ್ಯಾಂಕರ್‌ನಲ್ಲಿ ಈ ಹಿಂದಿನ ನಾಲ್ಕು ಬಿಎಂಸಿಗಳಲ್ಲಿ ತುಂಬಿಸಿಕೊಂಡು ಬಂದಿರುವ ಹಾಲನ್ನೂ ಇಲ್ಲಿಯೇ ಗುಣಮಟ್ಟ ಪರೀಕ್ಷಿಸಬೇಕು. ಅಲ್ಲಿಯವರೆಗೂ ಲಾರಿಯನ್ನು ಬಿಡುವುದಿಲ್ಲ ಎಂದು ಟ್ಯಾಂಕರ್ ಲಾರಿಯನ್ನು ತಡೆದು ನಿಲ್ಲಿಸಿದರು.

ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಭೇಟಿ ನೀಡಿದ ಮನ್‌ಮುಲ್ ಅಧಿಕಾರಿಗಳು ಮತ್ತು ಟ್ಯಾಂಕರ್ ಲಾರಿ ಮಾಲೀಕರು ಎರಡೂ ಲ್ಯಾಕ್ಟೋಮೀಟರ್‌ಗಳಲ್ಲಿ ಹಾಲಿನ ಗುಣಮಟ್ಟ ಪರೀಕ್ಷೆ ನಡೆಸಿದರು. ಈ ವೇಳೆ ಒಂದೊಂದು ಲ್ಯಾಕ್ಟೋಮೀಟರ್‌ನಲ್ಲಿ ವ್ಯತ್ಯಾಸ ಕಂಡುಬಂತು. ಇದರಿಂದ ರೈತರಲ್ಲಿದ್ದ ಅನುವಾನ ಮತ್ತಷ್ಟು ಹೆಚ್ಚಾಯಿತು.

ಲ್ಯಾಕ್ಟೋಮೀಟರ್‌ನಲ್ಲಿರುವ ದೋಷವನ್ನು ಸರಿಪಡಿಸಲಾಗುವುದು. ಈಗ ಟ್ಯಾಂಕರ್‌ಗೆ ಹಾಲನ್ನು ತುಂಬಿಸಿ ಲಾರಿಯನ್ನು ಕಳುಹಿಸಿಕೊಡಿ ಎಂದು ಮನವಿ ಮಾಡಿಕೊಂಡರೂ ಪಟ್ಟುಬಿಡದ ರೈತರು, ಟ್ಯಾಂಕರ್‌ನಲ್ಲಿರುವ ಈ ಹಿಂದಿನ ಬಿಎಂಸಿ ಕೇಂದ್ರಗಳ ಹಾಲನ್ನೂ ಪರೀಕ್ಷೆಗೊಳಪಡಿಸಬೇಕೆಂದು ಪಟ್ಟು ಹಿಡಿದರು. ಇದಕ್ಕೆ ಒಪ್ಪದ ಅಧಿಕಾರಿಗಳು ಜಿಲ್ಲಾ ಹಾಲು ಒಕ್ಕೂಟದಲ್ಲಿಯೇ ಎಲ್ಲ ಹಾಲನ್ನು ಪರೀಕ್ಷಿಸಲಾಗುವುದು. ನೀವು ಅಲ್ಲಿಗೇ ಬಂದು ನೋಡಬಹುದೆಂದು ಹಾರಿಕೆಯ ಉತ್ತರ ನೀಡಿದರು. ಇದಕ್ಕೆ ಒಪ್ಪದ ಗ್ರಾಮದ ರೈತರು, ರಾತ್ರಿ ಕಳೆದರೂ ಸರಿ ಟ್ಯಾಂಕರ್‌ನಲ್ಲಿರುವ ಎಲ್ಲಾ ಬಿಎಂಸಿಗಳ ಹಾಲಿನ ಗುಣಮಟ್ಟ ಇಲ್ಲಿಯೇ ಪರೀಕ್ಷಿಸಬೇಕೆಂದು ಪಟ್ಟು ಹಿಡಿದು ಕುಳಿತರು. ಇದರಿಂದ ವಿಚಲಿತರಾಗಿರುವ ಅಧಿಕಾರಿಗಳು ಮತ್ತು ಟ್ಯಾಂಕರ್  ಮಾಲೀಕರು ದಿಕ್ಕು ತೋಚದೆ ಗ್ರಾಮದಲ್ಲಿಯೇ ಬೀಡುಬಿಟ್ಟಿದ್ದಾರೆ. ಬೆಳಿಗ್ಗೆ ಬಂದಿದ್ದ ಟ್ಯಾಂಕರ್ ಲಾರಿಯನ್ನು ಸಂಜೆಯಾದರೂ ಬಿಟ್ಟಿರಲಿಲ್ಲ.

ಲ್ಯಾಕ್ಟೋಮೀಟರ್ ದಂಧೆ ಶಂಕೆ

ಬಿಎಂಸಿ ಕೇಂದ್ರ ಮತ್ತು ಹಾಲಿನ ಟ್ಯಾಂಕರ್ ಲಾರಿ ಚಾಲಕರ ಬಳಿ ಒಂದೇ ಮಾದರಿಯ ಲ್ಯಾಕ್ಟೋಮೀಟರ್ ಇರಬೇಕು. ಆದರೆ ಮೇಲ್ನೋಟಕ್ಕೆ ಎರಡೂ ಲ್ಯಾಕ್ಟೋಮೀಟರ್‌ಗಳು ಒಂದೇ ರೀತಿ ಕಂಡು ಬಂದರೂ ಸಹ ಗುಣಮಟ್ಟ ಪರೀಕ್ಷಿಸುವ ಸಮಯದಲ್ಲಿ ವ್ಯತ್ಯಾಸ ತೋರುತ್ತಿವೆ. ಇದನ್ನು ನೋಡಿದರೆ ಹಾಲಿಗೆ ನೀರು ಮಿಶ್ರಿತ ಹಗರಣ ಬಯಲಾದ ನಂತರ ಮನ್‌ಮುಲ್ ಮತ್ತೊಂದು ದಂಧೆಗೆ ಇಳಿದಿರಬಹುದೇ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಇದನ್ನು ಉನ್ನತ ಮಟ್ಟದಲ್ಲಿ ತನಿಖೆ ನಡೆಸಿ ಹೈನುಗಾರಿಕೆಯನ್ನೇ ನಂಬಿಕೊಂಡಿರುವ ರೈತರ ನೆರವಿಗೆ ಸರ್ಕಾರ ಮತ್ತು ಜಿಲ್ಲಾಡಳಿತ ನಿಲ್ಲಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿದೆ.

× Chat with us