ಕೆಎಸ್‌ಆರ್‌ಟಿಸಿಯಿಂದ ಮಹಿಳಾ ಉದ್ಯೋಗಿಗಳಿಗೆ ವಿಶೇಷ ಕೊಡುಗೆ

ಮಗು ದತ್ತು ಪಡೆದಾಗಲೂ 180 ದಿನ ರಜೆಯ ಅವಕಾಶ

ಬೆಂಗಳೂರು: ಇದುವರೆಗೆ ರಾಜ್ಯ ಸರ್ಕಾರದಿಂದ ಕೇವಲ ಪ್ರಸೂತಿ ರಜೆಯಾಗಿ ಮಹಿಳಾ ಉದ್ಯೋಗಿಗಳಿಗೆ 180 ದಿನಗಳನ್ನು ನೀಡಲಾಗುತ್ತಿತ್ತು. ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ದಲ್ಲಿನ ಮಹಿಳಾ ನೌಕರರು ಮಗುವನ್ನು ದತ್ತು ಪಡೆದಾಗಲೂ ಪ್ರಸೂತಿ ರಜೆಯ ಮಾದರಿಯಲ್ಲೇ 180 ದಿನಗಳ ರಜೆ ಸಿಗಲಿದೆ.

ಈ ಸಂಬಂಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ ಕಳಸದ ಎಲ್ಲಾ ಇಲಾಖಾ ಮುಖ್ಯಸ್ಥರಿಗೆ ಪತ್ರ ಬರೆದಿದ್ದು, ರಾಜ್ಯ ಸರ್ಕಾರವು ನಿಗಮದ ಮಹಿಳಾ ಉದ್ಯೋಗಿಗಳಿಗೆ ಮಗು ದತ್ತು ಪಡೆದ ದಿನಾಂಕದಿಂದ ಒಂದು ವರ್ಷ ಇಲ್ಲವೇ, ಮಗುವಿಗೆ ಒಂದು ವರ್ಷ ತುಂಬುವವರೆಗೆ ಅವರ ಖಾತೆಯಲ್ಲಿರೋ ರಜೆ ಹಾಗೂ ಅಗತ್ಯವಿದ್ದಲ್ಲಿ ಖಾತೆಯಲ್ಲಿ ಇಲ್ಲದ ರಜೆ ಮಂಜೂರು ಮಾಡಲು ಅವಕಾಶ ಕಲ್ಪಿಸಿದ್ದಾರೆ.

ಈ ಆದೇಶದಂತೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ಅನುಸಾರದ ಷರತ್ತಿಗೆ ಒಳಪಟ್ಟು, ಮಹಿಳಾ ಸರ್ಕಾರಿ ಉದ್ಯೋಗಿಗಳಿಗೆ ಮಗು ದತ್ತು ಪಡೆದ ಸಂದರ್ಭದಲ್ಲಿ ಮಕ್ಕಳ ಪೋಷಣೆಗಾಗಿ 180 ದಿನಗಳ ರಜೆ (ಹೆರಿಗೆ ರಜೆ ಮಾದರಿಯಲ್ಲಿ) ದೊರೆಯಲಿದೆ.

ಆದರೆ, ಮಹಿಳಾ ಉದ್ಯೋಗಿಗಳು ಮಗುವನ್ನು ದತ್ತು ಪಡೆದ ಸಂದರ್ಭದಲ್ಲಿ ಎರಡು ಜೀವಂತ ಮಕ್ಕಳನ್ನು ಹೊಂದಿರಬಾರದು ಎಂಬುದಾಗಿ ಷರತ್ತು ವಿಧಿಸಿ, ಆದೇಶ ಹೊರಡಿಸಿದ್ದಾರೆ.

× Chat with us