ಮೈಸೂರು ಅರಸರು ಕಟ್ಟಿಕೊಟ್ಟ ದೊಡ್ಡಾಸ್ಪತ್ರೆ ನಿರ್ವಹಣೆಯ ಕೊರತೆಯಿಂದ ನಲುಗುತ್ತಿದೆ.
ಎಚ್.ಎಸ್.ದಿನೇಶ್‌ಕುಮಾರ್
ಮೈಸೂರು : ಮಂಡ್ಯ, ಚಾಮರಾಜನಗರ, ಕೊಡಗು ಹಾಗೂ ಹಾಸನ ಜಿಲ್ಲೆಯ ಜನರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ಕೃಷ್ಣರಾಜೇಂದ್ರ ಆಸ್ಪತ್ರೆ ಜನರ ಬಾಯಿಯಲ್ಲಿ ಮಾತ್ರ ದೊಡ್ಡಾಸ್ಪತ್ರೆ ಎಂದೇ ಕರೆಸಿಕೊಳ್ಳುತ್ತದೆ. ಪ್ರತಿನಿತ್ಯ ಸಾವಿರಾರು ಮಂದಿ ಭೇಟಿ ನೀಡುವ ಈ ಪಾರಂಪರಿಕ ಕಟ್ಟಡ ಹಲವು ಇಲ್ಲಗಳ ನಡುವೆಯೇ ಕಾರ್ಯನಿರ್ವಹಿಸುತ್ತಿದೆ.
ದಶಕಗಳ ಹಿಂದೆ ಜನರಿಗೆ ಕಾಯಿಲೆ ಬಂದಲ್ಲಿ ಸೂಕ್ತ ಚಿಕಿತ್ಸೆಗೆ ಪರದಾಡಬೇಕಿತ್ತು. ವೈದ್ಯರೂ ಇಲ್ಲ, ವ್ಯವಸ್ಥೆಯೂ ಇಲ್ಲ ಎಂಬ ಕಾಲಘಟ್ಟವದು. ಅಂತಹ ಸಂದರ್ಭದಲ್ಲಿ ಜನರ ಕಷ್ಟವನ್ನು ಅರಿತ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರಿನಲ್ಲಿ ಒಂದು ಆಸ್ಪತ್ರೆಯನ್ನು ತೆರೆಯಲು ನಿರ್ಧರಿಸಿ ಮೊದಲಿಗೆ 1889 ರಲ್ಲಿ ಮಹಿಳೆಯರಿಗಾಗಿ ಚೆಲುವಾಂಬ ಆಸ್ಪತ್ರೆಯನ್ನು ಆರಂಭಿಸಿದರು. 1918ರಲ್ಲಿ ಕೃಷ್ಣರಾಜೇಂದ್ರ ಆಸ್ಪತ್ರೆಯನ್ನು ಆರಂಭಿಸಿದರು. ಹಲವು ರಾಜ್ಯಗಳಲ್ಲಿ ವೈದ್ಯಕೀಯ ವ್ಯಾಸಂಗ ಮಾಡಿದ್ದ ವೈದ್ಯರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.
ಇದನ್ನು ಸೂಕ್ಷವಾಗಿ ಗಮನಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಭಾಗದ ಮಕ್ಕಳೂ ವೈದ್ಯಕೀಯ ಕ್ಷೇತ್ರಕ್ಕೆ ಬರಬೇಕು ಎಂಬ ಉದ್ದೇಶದಿಂದ 1924ರಲ್ಲಿ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯನ್ನು ಆರಂಭಿಸಿದರು.
ನಂತರ ಚೆಲುವಾಂಬ ಹಾಗೂ ಕೃಷ್ಣರಾಜೇಂದ್ರ ಆಸ್ಪತ್ರೆ ಎಂಎಂಸಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಂದಿನಿಂದ ಇಂದಿನವರೆಗೂ ಮೈಸೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಜನರ ಬಾಯಲ್ಲಿ ಕೆ.ಆರ್.ಆಸ್ಪತ್ರೆಯು ‘ದೊಡ್ಡಾಸ್ಪತ್ರೆ’ ಎಂದೇ ಖ್ಯಾತಿ ಪಡೆದಿದೆ.
ಜನರ ಒಳಿತಿಗಾಗಿ ಶತಮಾನದ ಹಿಂದೆ ಮೈಸೂರು ಅರಸರು ಕಟ್ಟಿಕೊಟ್ಟ ದೊಡ್ಡಾಸ್ಪತ್ರೆ ಇಂದು ನಿರ್ವಹಣೆಯ ಕೊರತೆಯಿಂದ ನಲುಗುತ್ತಿದೆ.
ಸದ್ಯಆಸ್ಪತ್ರೆಯ 1050 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿದೆ. ಶಸ್ತ್ರ ಚಿಕಿತ್ಸೆ, ಕಣ್ಣಾಸ್ಪತ್ರೆ, ಯುರಾಲಜಿ, ಮೂಳೆ ವಿಭಾಗ, ನರ ರೋಗ ವಿಭಾಗ, ಕ್ಷ ಕಿರಣ ವಿಭಾಗ, ಐಸಿಯು, ಹೊರ ರೋಗಿ ವಿಭಾಗ ಹೀಗೆ ರೋಗಿಗಳ ಅನುಕೂಲಕ್ಕಾಗಿ ಸಾಕಷ್ಟು ವಿಭಾಗಗಳನ್ನು ತೆರೆದು ಸೇವೆಯನ್ನು ನೀಡಲಾಗುತ್ತಿದೆ.
ಇಷ್ಟೆಲ್ಲಾ ವ್ಯವಸ್ಥೆಗಳಿದ್ದರೂ ಪಾರಂಪರಿಕ ಕಟ್ಟಡವನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದರ ಬಗ್ಗೆ ಆಸ್ಪತ್ರೆಯ ಆಡಳಿತದ ಚುಕ್ಕಾಣಿ ಹಿಡಿದಿರುವವರು ಆಲೋಚಿಸುತ್ತಿಲ್ಲ. ಅವರ ಪ್ರಕಾರ ಇದಕ್ಕೆ ಕಾರಣ ಅನುದಾನದ ಕೊರತೆಯಂತೆ.
ಆಸ್ಪತ್ರೆಯ ಕಟ್ಟಡದ ಕೆಲವೆಡೆ ಬಿರುಕು ಬಿಟ್ಟಿದೆ. ಕಣ್ಣಾಸ್ಪತ್ರೆಯ ಕಟ್ಟಡದ ಒಂದು ಭಾಗ ಕುಸಿಯುವ ಹಂತದಲ್ಲಿದೆ. ಕೆ.ಆರ್.ಆಸ್ಪತ್ರೆಯ ಮುಖ್ಯ ಕಟ್ಟಡ, ಕಣ್ಣಾಸ್ಪತ್ರೆ, ಚೆಲುವಾಂಬ ಆಸ್ಪತ್ರೆಗಳ ಕಟ್ಟಡಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಗೋಡೆಗಳಲ್ಲಿ ಯಾವಾಗಲೂ ತೇವಾಂಶ ಇರುತ್ತದೆ. ಆಸ್ಪತ್ರೆಯ ಒಳ ಆವರಣ ಇದಕ್ಕಿಂತ ಭಿನ್ನವಾಗಿಲ್ಲ. ಕೆ.ಆರ್.ಆಸ್ಪತ್ರೆ ಹಾಗೂ ಚಲುವಾಂಬ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರ ಕೊಠಡಿಯ ಮಗ್ಗುಲಲ್ಲೇ ಕಟ್ಟಡದ ಚಾವಣಿಯ ಗಾರೆ ಕುಸಿದಿದೆ. ಮತ್ತೆ ಕೆಲವೆಡೆ ಕುಸಿಯುವ ಹಂತದಲ್ಲಿದೆ. ಸ್ವಚ್ಛತೆಯಂತೂ ದೂರದ ಮಾತು.
ಕಟ್ಟಡಕ್ಕೆ ಅಳವಡಿಸಿರುವ ಕಿಟಿಕಿಗಳ ಮರದ ಹಲಗೆಗಳು ಕಿತ್ತುಬಂದಿವೆ. ಇನ್ನು ಕೆಲವೆಡೆ ಕಿಟಕಿಯ ಗಾಜುಗಳು ಒಡೆದು ಹೋಗಿವೆ. ಇದೇ ಹಾದಿಯಲ್ಲಿ ಪ್ರತಿ ನಿತ್ಯ ವೈದ್ಯಕೀಯ ಅಧೀಕ್ಷಕರು, ಸ್ಥಾನಿಕ ವೈದ್ಯಾಧಿಕಾರಿಗಳು ಓಡಾಡುತ್ತಾರೆ. ಆದರೂ ದುರಸ್ತಿಗೆ ಮನಸ್ಸು ಮಾಡಿಲ್ಲ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಪಾರಂಪರಿಕ ಕಟ್ಟಡ ಕುಸಿದ ನಂತರ ಪಶ್ಚಾತ್ತಾಪ ಪಟ್ಟರೆ ಯಾವುದೇ ಪ್ರಯೋಜನವಿಲ್ಲ
ಕಟ್ಟಡ ದುರಸ್ತಿ ಹಾಗೂ ಸ್ವಚ್ಛತೆಗೆಂದು ಸರ್ಕಾರ 89 ಕೋಟಿ ರೂ. ಅನುದಾನ ನೀಡುತ್ತಿದೆ. ಈ ಹಣದಲ್ಲಿ ಆಸ್ಪತ್ರೆಯನ್ನು ನವೀಕರಿಸಲಾಗುವುದು. ದುರಸ್ತಿಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ನಡೆದಿದೆ. ಕಟ್ಟಡವನ್ನು ವರ್ಷಕ್ಕೊಮ್ಮೆ ಸ್ವಚ್ಛಗೊಳಿಸಲಾಗುತ್ತದೆ. ಮಳೆಯ ಕಾರಣ ಗೋಡೆಯ ಅಂಚಿನಲ್ಲಿ ಗಿಡಗಳು ಬೆಳೆಯುತ್ತವೆ. 6ತಿಂಗಳಿಗೊಮ್ಮೆ ಸ್ವಚ್ಛಗೊಳಿಸಲು ಕ್ರಮ ವಹಿಸಲಾಗುವುದು.
-ಡಾ.ನಂಜುಂಡಸ್ವಾಮಿ, ವೈದ್ಯಕೀಯ ಅಧೀಕ್ಷಕರು ಕೆ.ಆರ್.ಆಸ್ಪತ್ರೆ.
ಕೆ.ಆರ್.ಆಸ್ಪತ್ರೆ ಆವರಣದಲ್ಲಿ 14 ಕಟ್ಟಡಗಳಿವೆ. ನಾನು ಶಾಸಕನಾದ ನಂತರ ಕಟ್ಟಡವನ್ನು ಪರಿಶೀಲಿಸಿ ಕಟ್ಟಡಕ್ಕೆ ಕಾಯಕಲ್ಪ ನೀಡಲು ನಿರ್ಧರಿಸಲಾಯಿತು. ಹೀಗಾಗಿ ಸರ್ಕಾರದ ಮಟ್ಟದಲ್ಲಿ ವ್ಯವಹರಿಸಿ ಕಟ್ಟಡ ನವೀಕರಣ ಹಾಗೂ ದುರಸ್ತಿಗೆಂದು 89.95 ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಿಸಲಾಗಿದೆ. ಆದಷ್ಟು ಶೀಘ್ರವಾಗಿ ಕಟ್ಟಡವನ್ನು ದುರಸ್ತಿಗೊಳಿಸಲಾಗುವುದು. ಇದರ ಜೊತೆಗೆ ಮುಡಾ ಎದುರಿಗಿರುವ ಎಂಎಂಸಿ ಹಾಸ್ಟೆಲ್ ಕಟ್ಟಡ ದುರಸ್ತಿಗೂ ಅನುದಾನ ತರಲಾಗಿದೆ.
-ಎಲ್.ನಾಗೇಂದ್ರ, ಶಾಸಕರು.
ಮೈಸೂರು: ಮಕ್ಕಳು ಕೇವಲ ಪಠ್ಯ ಕ್ರಮಕ್ಕೆ ಮಾತ್ರ ಸೀಮಿತವಾಗದೆ, ತಮ್ಮಲ್ಲಿರುವಂತಹ ಪ್ರತಿಭೆಗಳನ್ನು ಅನಾವರಣಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ…
ಬೆಂಗಳೂರು: ಕೆಪಿಎಸ್‌ಸಿ ವತಿಯಿಂದ ಇದೇ ಡಿಸೆಂಬರ್ 29ಕ್ಕೆ ಕೆಎಎಸ್ ಮರು ಪರೀಕ್ಷೆ ನಡೆಯುತ್ತಿದ್ದು, ಮತ್ತೆ ಈ ಪರೀಕ್ಷೆಯಲ್ಲಿ ಮತ್ತೆ ಬೇಜವಾಬ್ದಾರಿತನ…
ಮೈಸೂರು: ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಇಂದು(ಡಿ.23) ಮೈಸೂರಿನ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ…
ಹುಬ್ಬಳ್ಳಿ : ಸಿಲಿಂಡರ್ ಸ್ಫೋಟಗೊಂಡ ಪರಿಣಾಮ 9 ಮಂದಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ತಡರಾತ್ರಿ ಹುಬ್ಬಳ್ಳಿಯಲ್ಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಬಿಜೆಪಿ ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಅವರು ಆಕ್ಷೇಪಾರ್ಹ ನೀಡಿರುವ ಹೇಳಿಕೆಯ ಕೇಸ್…
ಶಿವರಾಜಕುಮಾರ್ ಶಸ್ತ್ರಚಿಕಿತ್ಸೆಗೆಂದು ಇತ್ತೀಚೆಗೆ ಅಮೇರಿಕಾಗೆ ಪ್ರಯಾಣ ಬೆಳಸಿದ್ದಾರೆ. ಜನವರಿ 26ರಂದು ಅವರು ಚಿಕಿತ್ಸೆ ಮುಗಿಸಿ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಬೆಂಗಳೂರಿಗೆ ವಾಪಸ್ಸಾಗಿ…