ಕಸಾಪ ಚುನಾವಣೆ; ನಾಮಪತ್ರ ಹಿಂಪಡೆದ ಕೊ.ಸು.ನರಸಿಂಹಮೂರ್ತಿ

ಮೈಸೂರು: ಹಿರಿಯ ಸಾಹಿತಿ ಬನ್ನೂರು ಕೆ.ರಾಜು ಅವರನ್ನು ಬೆಂಬಲಿಸಿ ನಾಮಪತ್ರ ಹಿಂಪಡೆದಿದ್ದೇನೆ ಎಂದು ಕನ್ನಡ ಪರ ಹೋರಾಟಗಾರ ಕೊ.ಸು.ನರಸಿಂಹಮೂರ್ತಿ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕನ್ನಡದ ನೆಲ-ಜಲವನ್ನು ಕಾಯುವ ಕೆಲಸ ಮಾಡುವ ವಿಚಾರದಲ್ಲಿ ಸಾಹಿತ್ಯ ಪರಿಷತ್ ಆಸಕ್ತಿ ತೋರುತ್ತಿಲ್ಲ. ಕಾವೇರಿ ವಿಚಾರದಲ್ಲೇ ಆಗಲಿ, ಗಡಿ ವಿಚಾರದಲ್ಲೇ ಆಗಲಿ ತಾನು ತನ್ನನ್ನು ತೊಡಗಿಸಿಕೊಳ್ಳದೇ ಕನ್ನಡಿಗರಿಗೆ ಅನ್ಯಾಯ ಮಾಡಿದೆ. ಕಸಾಪದ ಅಧ್ಯಕ್ಷರಾಗಿ ಚುನಾಯಿತರಾದವರು ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನವೆನ್ನುವಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಇದು ಬದಲಾಗಬೇಕಿದೆ ಎಂದರು.

ಸಾಹಿತ್ಯದ ಗಂಧ-ಗಾಳಿಯನ್ನರಿಯದ ಮಂದಿ ಹಣ ಮತ್ತು ಜಾತಿ ಬಲದಿಂದ ಜಿಲ್ಲಾಧ್ಯಕ್ಷರಾಗಿ ಚುನಾಯಿತರಾಗುವ ಮಾನದಂಡ ಆಗುತ್ತಿದೆ. ಜಿಲ್ಲಾ ಕನ್ನಡ ಸಾಹಿತ್ಯನಲ್ಲಿ ಈ ಹಿಂದಿನ ಆಡಳಿತದಲ್ಲಿ ಭ್ರಷ್ಟಾಚಾರವಾಗಿದೆ. ಹೀಗಾಡಿ ಭ್ರಷ್ಟಾಚಾರವನ್ನು ತೊಡೆದು ಹಾಕಿ ಪ್ರಮಾಣಿಕ, ಕನ್ನಡ ಸಾಹಿತ್ಯ ಕೃಷಿ ಮಾಡಿರುವವರು ಆಯ್ಕೆಯಾಗಬೇಕಿದೆ. ಹೀಗಾಗಿ ಕಸಾಪ ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಅಭ್ಯರ್ಥಿಯಾಗಿ ಸಲ್ಲಿಸಿದ್ದ ನಾಮಪತ್ರವನ್ನು ಹಿಂಪಡೆದಿದ್ದು, ಹಿರಿಯ ಸಾಹಿತಿ ಬನ್ನೂರು ಕೆ.ರಾಜು ಅವರಿಗೆ ಬೆಂಬಲ ನೀಡಲಿದ್ದೇವೆ ಎಂದರು.

ಎಚ್.ಎಸ್.ಮಂಜುನಾಥ ಶೆಟ್ಟಿ, ಗೋಪಾಲ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

 

× Chat with us