ಅಕ್ರಮವಾಗಿ ಬಹು ನಿವೇಶನ ವಿಂಗಡಿಸಿ ಇ-ಸ್ವತ್ತು ನೀಡಿದ ಕೊಳ್ಳೇಗಾಲ ನಗರಸಭೆ ಪೌರಾಯುಕ್ತ ಅಮಾನತು

ಚಾಮರಾಜನಗರ: ವರ್ಗಾವಣೆಯಾದ ನಂತರ ಡಿಜಿಟಲ್ ಕೀ ಉಪಯೋಗಿಸಿ ಏಕ ನಿವೇಶನವನ್ನು ನಗರ ಪ್ರಾಧಿಕಾರದ ಅನುಮತಿ ಪಡೆಯದೇ ಬಹು ನಿವೇಶಗಳನ್ನಾಗಿ ವಿಂಗಡಿಸಿ ಇ-ಸ್ವತ್ತು ನೀಡಿ ಅಕ್ರಮ ಎಸಗಿದ ಕೊಳ್ಳೇಗಾಲ ನಗರಸಭೆ ಪೌರಾಯುಕ್ತ ನಾಗಶೆಟ್ಟಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಪೌರಡಳಿತ ನಿರ್ದೇಶನಾಲಯದ ನಿರ್ದೇಶಕರು ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ನಾಗಶೆಟ್ಟಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕರ್ತವ್ಯದಿಂದ ಬಿಡುಗಡೆಗೊಳಿಸಿ ಜಿಲ್ಲಾಧಿಕಾರಿ ಡಾ‌.ಎಂ.ಆರ್.ರವಿ ಆದೇಶಿಸಿದ್ದಾರೆ.

ಕೊಳ್ಳೇಗಾಲ ನಗರ ಸಭೆಯ ವಾರ್ಡ್ ಸಂಖ್ಯೆ 18 ರ ಬಡಾವಣೆಗೆ ಸೇರಿದ ಖಾತೆ ಸಂಖ್ಯೆ 3815 ರ ಏಕ ನಿವೇಶನವನ್ನು ನಗರ ಯೋಜನಾ ಪ್ರಾಧಿಕಾರದ ಅನುಮತಿ ಪಡೆಯದೇ ಪೌರಯುಕ್ತರಾದ ನಾಗಶೆಟ್ಟಿ ಅವರು ವರ್ಗಾವಣೆಯಾದ ನಂತರ ಡಿಜಿಟಲ್ ಕೀ ಉಪಯೋಗಿಸಿ ಬಹು ನಿವೇಶನಗಳನ್ನಾಗಿ ವಿಂಗಡಿಸಿ ಇ-ಸ್ವತ್ತುಗಳನ್ನು ನೀಡಿ ಅಕ್ರಮವೆಸಗಿರುವ ಕಾರಣ ಕೊಳ್ಳೇಗಾಲ ನಗರಸಭೆ ಪೌರಾಯುಕ್ತ ನಾಗಶೆಟ್ಟಿ (ಮೂಲ ಹುದ್ದೆ ಸಮುದಾಯ ಸಂಘಟನಾಧಿಕಾರಿ) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ಅವರ ಹುದ್ದೆಯ ಲೀನ್ ಅನ್ನು ದೇವದುರ್ಗ ಪುರಸಭೆಯಲ್ಲಿ ಖಾಲಿ ಇರುವ ಸಮುದಾಯ ಸಂಘಟನಾಧಿಕಾರಿ ಹುದ್ದೆಗೆ ವರ್ಗಾಯಿಸಿ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ನಾಗಶೆಟ್ಟಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕರ್ತವ್ಯದಿಂದ ಬಿಡುಗಡೆಗೊಳಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಆದೇಶಿಸಿದ್ದಾರೆ. ಅಮಾನತಿನಿಂದ ತೆರವಾಗಿರುವ ಕೊಳ್ಳೇಗಾಲ ನಗರಸಭೆ ಪೌರಾಯುಕ್ತರ ಹುದ್ದೆಗೆ ಕೊಳ್ಳೇಗಾಲ ನಗರಸಭೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಅಲ್ತಾಪ್ ಅಹ್ಮದ್ ಅವರನ್ನು ಅಧಿಕ ಪ್ರಭಾರದಲ್ಲಿರಿಸಿ ಪೌರಾಯುಕ್ತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಡಾ‌.ಎಂ.ಆರ್.ರವಿ ಅವರು ಆದೇಶಿಸಿದ್ದಾರೆ.

× Chat with us