ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ದಿನಾಂಕ ಪ್ರಕಟ

ಬೆಂಗಳೂರು: ಜುಲೈನಲ್ಲಿ ನಡೆಯಲಿರುವ 2021ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸೋಮವಾರ (ಜೂನ್ 28) ದಿನಾಂಕ ಪ್ರಕಟವಾಗುವ ಸಾಧ್ಯತೆಯಿದೆ. ಸುರಕ್ಷಿತಾ ವಾತಾವರಣದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ನೇತೃತ್ವದಲ್ಲಿ ಸಭೆ ನಡೆಯಲಿದೆ.

ಜಿಲ್ಲಾಧಿಕಾರಿಗಳು, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿಎಚ್‌ಒಗಳು ಸೇರಿದಂತೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಮತ್ತು ರಾಜ್ಯದ ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಯ ಜೊತೆ ಮಹತ್ವದ ಸಭೆ ನಡೆಯಲಿದೆ.

ಕೊರೊನಾ ನಡುವೆಯೂ ಪರೀಕ್ಷೆ ನಡೆಸಲು ಮಹತ್ವದ ಚರ್ಚೆ ನಡೆಯಲಿದ್ದು, ಅಧಿಕಾರಿಗಳ ಸಲಹೆ, ಸೂಚನೆಯೊಂದಿಗೆ ಜುಲೈ ಮೂರನೇ ವಾರದಲ್ಲಿ ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಈಗಾಗಲೇ ಶಿಕ್ಷಣ ಇಲಾಖೆಯಿಂದ ಎಲ್ಲಾ ತಯಾರಿ ಆರಂಭವಾಗಿದೆ.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪರೀಕ್ಷಾ ತುರ್ತು ಸಿದ್ಧತೆಯನ್ನು ಆರಂಭಿಸಿದೆ. ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಕೊರೊನಾ ನಿಯಮಗಳನ್ನು ಪಾಲಿಸಲು ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪರೀಕ್ಷಾ ಕೇಂದ್ರಗಳ ಸಿದ್ಧತೆ ನಡೆಯುತ್ತಿದೆ. ತುರ್ತಾಗಿ ಪರೀಕ್ಷಾ ಕೇಂದ್ರಗಳ ರಚನೆ ಮಾಡಿ ಮಾಹಿತಿ ನೀಡುವಂತೆ ರಾಜ್ಯದ ಎಲ್ಲ ನೋಡೆಲ್ ಅಧಿಕಾರಿಗಳು, ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕರ್ನಾಟಕ ಪ್ರೌಢ ಪರೀಕ್ಷಾ ಮಂಡಳಿ ನಿರ್ದೇಶಕರು ಸೂಚನೆ ನೀಡಿದ್ದಾರೆ.

ಏನೆಲ್ಲಾ ಕ್ರಮ?

* ಆರು ಆಡಿಗೆ ಒಂದರಂತೆ ಆಸನ ವ್ಯವಸ್ಥೆ
* ಒಂದು ಕೊಠಡಿಯಲ್ಲಿ 12 ವಿದ್ಯಾರ್ಥಿಗಳು
* ಕೊಠಡಿಯಲ್ಲಿ ಗಾಳಿ, ಬೆಳಕಿಗೆ ಆದ್ಯತೆ
* ಸಿಸಿಟಿವಿ ಕ್ಯಾಮೆರಾ ಅಳವಡಿಕೆ
* 6,000 ಪರೀಕ್ಷಾ ಕೇಂದ್ರಗಳು
* ಕೋವಿಡ್ ಲಕ್ಷಣದವರಿಗೆ ೨ ವಿಶೇಷ ಕೊಠಡಿ

× Chat with us