ಸಮ, ಬೆಸ ಮಾದರಿಯಲ್ಲಿ ಶಾಲೆ ಆರಂಭಿಸಿ: ಸರ್ಕಾರಕ್ಕೆ ತಜ್ಞರ ಸಲಹೆ

ಬೆಂಗಳೂರು: ಕೋವಿಡ್‌ ಕಾರಣದಿಂದಾಗಿ ಕರ್ನಾಟಕದಲ್ಲಿ ಬಂದ್‌ ಆಗಿದ್ದ ಶಾಲೆಗಳ ಪುನಾರಂಭ ಸಂಬಂಧ ತಜ್ಞರು ವರದಿ ಸಿದ್ಧಪಡಿಸಿದ್ದು, ಇಂದು (ಮಂಗಳವಾರ) ಮಧ್ಯಾಹ್ನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಸಲ್ಲಿಸಲಿದ್ದಾರೆ.

ರಾಜ್ಯದಲ್ಲಿ ಹಂತ ಹಂತವಾಗಿ ಶಾಲೆಗಳನ್ನು ಆರಂಭಿಸಲು ಡಾ.ದೇವಿಪ್ರಸಾದ್ ಶೆಟ್ಟಿ ಸಲಹೆ ನೀಡಿದ್ದಾರೆ. ಸಮ, ಬೆಸ ಮಾದರಿಯಲ್ಲಿ ತರಗತಿಗಳನ್ನು ಆರಂಭಿಸಿ, ಮೊದಲ ಹಂತದಲ್ಲಿ ಕಾಲೇಜುಗಳನ್ನು ಆರಂಭಿಸುವುದು. ಎರಡನೇ ಹಂತದಲ್ಲಿ 7ರಿಂದ 10ನೇ ತರಗತಿ, ಮೂರನೇ ಹಂತದಲ್ಲಿ 5ರಿಂದ 7ನೇ ತರಗತಿ ಆರಂಭಿಸಬೇಕು ಎಂದು ಹೇಳಿದ್ದಾರೆ.

ಶಾಲೆಗಳ ಆರಂಭಕ್ಕೆ ಕೋವಿಡ್‌ ನಿಯಮ ಪಾಲನೆ ಕಡ್ಡಾಯ. ಮಾಸ್ಕ್ ಕಡ್ಡಾಯವಾಗಿದ್ದು, ಸರ್ಕಾರವೇ ಮಾಸ್ಕ್ ನೀಡಬೇಕು. ಶಾಲೆಗಳಲ್ಲಿ ಮಕ್ಕಳಿಗೆ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು. ಶಿಕ್ಷಕರು, ಶಾಲೆಯ ಇತರೆ ಸಿಬ್ಬಂದಿಗೆ ಲಸಿಕೆ ಕಡ್ಡಾಯಗೊಳಿಸಬೇಕು. ಶಾಲಾ ಆವರಣಕ್ಕೆ ಅನ್ಯರಿಗೆ ಪ್ರವೇಶ ನಿರ್ಬಂಧಿಸಬೇಕು. ಆರೋಗ್ಯವಂತ ಮಕ್ಕಳು ಮಾತ್ರ ಶಾಲೆಗೆ ಬರಬೇಕು. ವಾರಕ್ಕೊಮ್ಮೆ ಸ್ಥಳೀಯ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಸಬೇಕು. ಮಕ್ಕಳಿಗೆ ಸರ್ಕಾರವೇ ಪ್ರತ್ಯೇಕ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಕೊರೊನಾ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಶಾಲಾ ಆವರಣ, ಸುತ್ತಮುತ್ತ ತಿನಿಸು ಮಾರಾಟವನ್ನು ನಿಷೇಧಿಸಬೇಕು. ಪೋಷಕರು ಸಮ್ಮತಿಸಿದರೆ ಮಕ್ಕಳನ್ನು ಶಾಲೆಗೆ ಕರೆತರುವುದು. ಮಕ್ಕಳ ಹಾಜರಾತಿ ಕಡ್ಡಾಯ ಮಾಡುವಂತಿಲ್ಲ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಆನ್‌ಲೈನ್ ಮತ್ತು ಆಫ್‌ಲೈನ್ ಎರಡು ಮಾದರಿಯ ಕಲಿಕೆಗೆ ಅವಕಾಶ ನೀಡಬಹುದು. ಮಕ್ಕಳಿಗೆ ಸರ್ಕಾರದಿಂದ ಪೌಷ್ಟಿಕಾಂಶ ಆಹಾರ ನೀಡಬೇಕು. ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಟವನ್ನು ಆಡಿಸಬೇಕು. ಊಟವನ್ನ ಸ್ಥಳೀಯ ಮಟ್ಟದಲ್ಲಿ ನೀಡಬೇಕೆಂದು ತಜ್ಞರು ತಿಳಿಸಿದ್ದಾರೆ.

ಶಾಲೆಗಳಲ್ಲಿ ದೈಹಿಕ ಅಂತರಕ್ಕೆ ಮೊದಲ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳ ಒಬ್ಬರ ವಸ್ತುಗಳು ಒಬ್ಬರು ಮುಟ್ಟದಂತೆ ನಿಗಾವಹಿಸಬೇಕು. ದಿನದಲ್ಲಿ 2ರಿಂದ 3 ಗಂಟೆ ಮಾತ್ರ ತರಗತಿ ನಡೆಯಬೇಕು. 12ರಿಂದ 18 ವರ್ಷದ ಮಕ್ಕಳಿಗೆ ಆದಷ್ಟು ಬೇಗ ಲಸಿಕೆ ನೀಡುವುದಕ್ಕೆ ಅನುಮೋದನೆ ಕೊಡುವುದು ಉತ್ತಮ. ಈ ನಿಯಮ ಪಾಲಿಸದಿದ್ದರೆ ಮಕ್ಕಳಿಗೆ ಹೆಚ್ಚು ಅಪಾಯವಾಗುತ್ತದೆ ಎಂದು ಸಹ ತಜ್ಞರು ಎಚ್ಚರಿಸಿದ್ದಾರೆ.

ರಾಜ್ಯದಲ್ಲಿ 18 ವರ್ಷದೊಳಗಿನ 2.38 ಕೋಟಿ ಮಕ್ಕಳಿದ್ದಾರೆ. ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಸೋಂಕು ಹರಡುತ್ತದೆ. 3.40 ಲಕ್ಷ ಮಕ್ಕಳಿಗೆ ಸೋಂಕು ಹರಡುತ್ತದೆ ಎಂದು ಅಂದಾಜಿಸಲಾಗಿದೆ. ಮಕ್ಕಳಿಗೆ ಚಿಕಿತ್ಸೆ ನೀಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. 6,801 ಐಸಿಯು, ಎಚ್​ಡಿಯು, ವೆಂಟಿಲೇಟರ್ ಬೆಡ್ 23,804 ಸಾಮಾನ್ಯ ಬೆಡ್‌ಗಳು ಬೇಕಾಗಬಹುದು. ಕೊವಿಡ್ ಕೇರ್ ಸೆಂಟರ್‌ಗಳಲ್ಲಿ 43,000 ಬೆಡ್ ಅಗತ್ಯವಿದೆ ಎಂದು ತಿಳಿಸಿದ ಡಾ.ದೇವಿಪ್ರಸಾದ್ ಶೆಟ್ಟಿ ಮಧ್ಯಂತರ ವರದಿ ಕೊಟ್ಟಿದ್ದಾರೆ. ಈ ಬಗ್ಗೆ ಚರ್ಚೆ ಮಾಡಿ ಸರ್ಕಾರ ನಿರ್ಧಾರ ಕೈಗೊಳ್ಳಬೇಕಿದೆ.

× Chat with us