ಕಾವೇರಿ ಕಾಲಿಂಗ್: ಗಿಡ ನೆಡಲು ಹಣ ಸಂಗ್ರಹಿಸಿದ್ದು ಅಷ್ಟು, ಕೊಟ್ಟ ಲೆಕ್ಕ ಮಾತ್ರ ಇಷ್ಟು!

ಬೆಂಗಳೂರು: ಇಶಾ ಫೌಂಡೇಷನ್ ಮುಖ್ಯಸ್ಥರಾದ ಜಗ್ಗಿ ವಾಸುದೇವ್ ಕೈಗೊಂಡಿರುವ ‘ಕಾವೇರಿ ಕಾಲಿಂಗ್’ ಗಿಡ ನೆಡುವ ಅಭಿಯಾನದಲ್ಲಿ ಸಂಗ್ರಹಿಸಿದ ಹಣ ಎಷ್ಟು ಎಂಬ ವಿಚಾರದ ವಾದ- ಪ್ರತಿವಾದದ ಹೈಕೋರ್ಟ್ ಕಲಾಪದಲ್ಲಿ ಗಮನ ಸೆಳೆಯಿತು.

ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವುದನ್ನು ನಿಲ್ಲಿಸುವಂತೆ ಕೋರಿ ಎ.ವಿ.ಅಮರನಾಥನ್ ಎಂಬುವರ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ವಿಭಾಗೀಯ ಪೀಠವು, ಕಾವೇರಿ ಕಾಲಿಂಗ್ ಯೋಜನೆಗೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸದಂತೆ ಅಧ್ಯಾತ್ಮ ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್‌ಗೆ ನಿರ್ದೇಶಿಸುವಂತೆ ಕೋರಿದ್ದ ಮನವಿಗೆ ಸಂಬಂಧಿಸಿದ ತೀರ್ಪನ್ನು ಕಾಯ್ದಿರಿಸಿತು.

ವಾದ- ಪ್ರತಿವಾದ ಏನು?

ಅರ್ಜಿದಾರ ಎ.ವಿ.ಅಮರನಾಥನ್ ಪರ ವಾದಿಸಿದ ವಕೀಲೆ ಬಿ.ವಿ.ವಿದ್ಯುಲ್ಲತಾ ಅವರು ‘‘ಇಶಾ ಫೌಂಡೇಶನ್ 253 ಕೋಟಿ ರೂ. ಗಿಡ ನೆಡಲು ಪ್ರತಿ ಗಿಡಕ್ಕೆ 42 ರೂ. ಸಂಗ್ರಹಿಸುತ್ತಿದೆ. ಅಂದರೆ ಅಂದಾಜು 10,626 ಕೋಟಿ ರೂ. ಜನರಿಂದ ಸಂಗ್ರಹಿಸುತ್ತಿದೆ. ಕಾವೇರಿ ನದಿ ತೀರದ ಪ್ರದೇಶವಾದ ತಲಕಾವೇರಿಯಿಂದ ತಮಿಳುನಾಡಿನ ತಿರುವಾಯೂರುವರೆಗೆ 639.1 ಕಿ.ಮೀ. ಪ್ರದೇಶದಲ್ಲಿ ಗಿಡ ನೆಡಲು ಈ ಹಣ ಸಂಗ್ರಹಿಸಿದೆ ಎಂದು ವಾದ ಮುಂದಿಟ್ಟರು.

ಆಗ ವಿಭಾಗೀಯ ಪೀಠವು ‘‘ಸರ್ಕಾರದ ಜಾಗದಲ್ಲಿ ಜನರು ಗಿಡ ನೆಡುವುದನ್ನು ತಡೆಯುವ ಯಾವುದಾದರೂ ಕಾನೂನು ಇದೆಯೇ’’ ಎಂದು ಪೀಠ ಪ್ರಶ್ನಿಸಿತು. ಆಗ, ವಿದ್ಯುಲತಾ ‘ಗಿಡ ನೆಡುವವರು ಅಗತ್ಯ ಅನುಮತಿ ಪಡೆಯಬೇಕಿದೆ’’ ಎಂದರು. ಮುಂದುವರಿದು, ಈ ಯೋಜನೆಗೆ 52.5 ಕೋಟಿ ರೂ. ತಗುಲುತ್ತದೆ ಎಂದು ಹೇಳಲಾಗಿದೆ. ಆದರೆ, ಇದಕ್ಕೆ ವಿರುದ್ಧವಾಗಿ ಸಾರ್ವಜನಿಕರಿಂದ ಸುಮಾರು 10,626 ಕೋಟಿ ರೂ. ಸಂಗ್ರಹಿಸಿ ವಂಚಿಸಲಾಗುತ್ತಿದೆ ಎಂದು ವಾದಿಸಿದರು.

ಆಗ ಫೌಂಡೇಷನ್ ಪವಾಗಿ ನ್ಯಾಯವಾದಿ ಉದಯ್ ಹೊಳ್ಳ ಅವರು, ರಾಜ್ಯ ಸರ್ಕಾರವು ಕಾವೇರಿ ಕಾಲಿಂಗ್ ಯೋಜನೆ ನಮ್ಮದಲ್ಲ ಎಂದಿದೆ. ಮೂರನೇ ಪ್ರತಿವಾದಿಯಾದ ಇಶಾ ಫೌಂಡೇಶನ್ ಯೋಜನೆ ಕೈಗೆತ್ತುಕೊಂಡಿದ್ದು, ಖಾಸಗಿ ಭೂಮಿಯಲ್ಲಿ ಗಿಡ ನೆಡುತ್ತಿದೆ. ಈ ಯೋಜನೆಗೆ 82.5 ಕೋಟಿ ರೂ. ಮಾತ್ರ ಸಂಗ್ರಹಿಸಲಾಗಿದೆ ಎಂದು ಸಮರ್ಥಿಸಿಕೊಂಡರು.

× Chat with us